ಬೆಂಗಳೂರು ವಿವಿ ಬಂದ್: ತರಗತಿ ಬಹಿಷ್ಕರಿಸಿ ‘ಕಾಂತರಾಜು ವರದಿ ಬಿಡುಗಡೆ’ ಗೆ ಆಗ್ರಹಿಸಿದ ವಿದ್ಯಾರ್ಥಿಗಳು

Update: 2024-01-10 14:58 GMT

ಬೆಂಗಳೂರು: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾಂತರಾಜು ಆಯೋಗ ವರದಿಯನ್ನು ರಾಜ್ಯ ಸರಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಬೆಂಗಳೂರು ವಿಶ್ವ ವಿದ್ಯಾಲಯ ಬಂದ್ ಮಾಡಿ ಬೃಹತ್ ಹೋರಾಟ ನಡೆಸಲಾಯಿತು.

ಬುಧವಾರ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದಲ್ಲಿ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಕರೆ ನೀಡಿದ್ದ ವಿಶ್ವವಿದ್ಯಾಲಯ ಬಂದ್ ಹೋರಾಟಕ್ಕೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಎಲ್ಲ ಮಾದರಿಯ ಬೋಧನಾ ಚಟುವಟಿಕೆಗಳನ್ನು ಜ್ಞಾನ ಭಾರತಿ ಆವರಣದಲ್ಲಿ ನಿಲ್ಲಿಸದ್ದರಿಂದ ಕೊಠಡಿಗಳು ಖಾಲಿಯಾಗಿದ್ದವು. ಮುಖ್ಯ ಕಚೇರಿ ಎದುರು ಸೇರಿದ್ದ ಪ್ರತಿಭಟನಾಕಾರರು ರಾಜ್ಯ ¸ಸರಕಾರ ಕಾಂತರಾಜು ಆಯೋಗ ವರದಿಯನ್ನು ಬಹಿರಂಗಪಡಿಸುವಂತೆ ಘೋಷಣೆ ಕೂಗಿದರು. ಆನಂತರ, ಬೆಂಗಳೂರು ವಿವಿ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಕೆ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ನಾಯಕ ಲೋಕೇಶ್ ರಾಮ್, ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧಾರಿತ ಮಾಹಿತಿಯನ್ನು ಮೂರು ಹಂತದ ಪರಿಶೀಲನೆಗೆ ಒಳಪಡಿಸಿ ಪ್ರತ್ಯೇಕ ರಾಜಕೀಯ ಮೀಸಲಾತಿ ರೂಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ 2010ರಲ್ಲಿ ರಾಜ್ಯಗಳಿಗೆ ಆದೇಶ ನೀಡಿದೆ. ಹಾಗಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಾಂತರಾಜು ವರದಿ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಅದು ಅಲ್ಲದೆ, ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಎಚ್. ಕಾಂತರಾಜು ಆಯೋಗದ ವರದಿಯು ಸಿದ್ಧಗೊಂಡಿತ್ತು. ರಾಜಕೀಯ ಕಾರಣಕ್ಕೆ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಹಿಂದಿನ ಸರ್ಕಾರಗಳು ವರದಿ ಸ್ವೀಕರಿಸುವ ಮನಸ್ಸು ಮಾಡಲಿಲ್ಲ. ಆಯೋಗದ ವರದಿಯಿಂದ ಪ್ರತಿಯೊಂದು ಸಮಾಜದ ಜನಸಂಖ್ಯೆ, ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಯು ಅಂಕಿ–ಅಂಶ ಸಹಿತ ಸ್ಪಷ್ಟವಾಗಿ ತಿಳಿಯಲಿದೆ ಎಂದು ಲೋಕೇಶ್ ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಚಂದ್ರು ಪೆರಿಯಾರ್, ಸತೀಶ್ ಜಿ.ಕೆ., ಗೋವಿಂದರಾಜ್ ಕೆ., ಸುಗುಣಾ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News