ಬೆಂಗಳೂರು: ಸೋಮವಾರ ಮುಂಜಾನೆ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತ

Update: 2024-08-12 23:53 IST
ಬೆಂಗಳೂರು: ಸೋಮವಾರ ಮುಂಜಾನೆ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತ
  • whatsapp icon

ಬೆಂಗಳೂರು: ನಗರದಲ್ಲಿ ಸೋಮವಾರ ಮುಂಜಾನೆ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೆಲ ಕಾಲ ಜನ ಜೀವನ ಅಸ್ತವ್ಯಸ್ತವಾಗಿತ್ತು. ಓಕಳಿಪುರಂ ಅಂಡರ್‍ಪಾಸ್‍ನಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ವಾಹನ ಸವಾರರ ಪರದಾಡಿದರು. ನೀರಿನಲ್ಲಿ ಆಂಬುಲೆನ್ಸ್, ವ್ಯಾನ್, ಆಟೋ ಸಿಲುಕಿ ಹಾಕಿಕೊಂಡಿತ್ತು.

ಮೆಜೆಸ್ಟಿಕ್, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಕೋರಮಂಗಲ, ಶಿವಾಜಿನಗರ, ಕಾರ್ಪೊರೇಷನ್ ಸರ್ಕಲ್, ಟೌನ್‍ಹಾಲ್, ಕೆ.ಆರ್.ಮಾರ್ಕೆಟ್, ಜಯನಗರ, ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ವಿಜಯನಗರ, ಕೆಂಗೇರಿ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ಕೆ.ಆರ್.ಪುರಂ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿದ್ದವು.

ಸಿಲ್ಕ್ ಬೋರ್ಡ್ ಸಿಗ್ನಲ್ ಬಳಿ ಭಾರಿ ಮಳೆಯಿಂದ ತೆರೆದುಕೊಂಡಿದ್ದ ಮ್ಯಾನ್‍ಹೋಲ್‍ಗೆ ಎರಡು ಕಾರುಗಳು ಬಿದ್ದಿದ್ದು, ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದೆ. ಕಾರಿನಲ್ಲಿದ್ದ ಇರಬ್ಬರನ್ನು ರಕ್ಷಿಸಲಾಯಿತು. ಮಾರತಹಳ್ಳಿ ಬಳಿ ಅಪಾರ್ಟ್‍ಮೆಂಟ್‍ನ ಬೇಸ್‍ಮೆಂಟ್‍ನ ಗೋಡೆ ಒಡೆದಿದ್ದು, ಕೂದಲೆಳೆಯ ಅಂತರದಲ್ಲಿ ಮನೆ ಮಂದಿ ಪಾರಾಗಿದ್ದಾರೆ.

ದಿಢೀರ್ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆರೆಯಾಗಿ ಪರಿವರ್ತನೆಯಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗದ ರಸ್ತೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿತ್ತು, ಸುಮಾರು ಎರಡು ಅಡಿಯಷ್ಟು ನೀರು ನಿಂತಿದ್ದವು. ನೀರು ಸರಾಗವಾಗಿ ಹರಿದು ಹೋಗದೇ ವಾಹನ ಸವಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆ.ಆರ್.ಮಾರ್ಕೆಟ್‍ನ ರಸ್ತೆಗಳೂ ಕೆಸರಿನಿಂದ ಕೂಡಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆ ಎದುರಾಗಿತ್ತು.

ಹಲವು ಪ್ರದೇಶಗಳಲ್ಲಿ ನೀರು ತುಂಬಿ ದಿಗ್ಬಂಧನ ಪರಿಸ್ಥಿತಿ ಏರ್ಪಟ್ಟಿದೆ. ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೇ ಪೇಟೆ, ಕಾಟನ್ ಪೇಟೆ ರಸ್ತೆ ಸಂಪೂರ್ಣ ಜಾಲವೃತವಾಗಿದ್ದವು. ಸುಲ್ತಾನ್ ಪೇಟೆ ಮುಖ್ಯ ರಸ್ತೆ ಸಂಪೂರ್ಣ ರಸ್ತೆ ಬಂದ್ ಆಗಿದ್ದು, ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿತ್ತು. ಪುಲಕೇಶಿ ನಗರದ ಎನ್.ಸಿ. ಕಾಲೋನಿಯಲ್ಲಿ ಮನೆಗಳು ಜಲಾವೃತಗೊಂಡಿದ್ದವು.

ಎಲ್ಲೆಲ್ಲಿ ಎಷ್ಟು ಮಳೆ: ರವಿವಾರ ತಡರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ನಗರದಲ್ಲಿ ಸರಾಸರಿ 52 ಮಿ.ಮೀ ಮಳೆಯಾಗಿದೆ. ಕೊಡಿಗೇಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 61.5 ಮಿ.ಮೀ ಮಳೆಯಾಗಿದೆ. ವಿವಿ ಪುರದಲ್ಲಿ 57.5ಮಿ.ಮೀ, ವಿದ್ಯಾಪೀಠದಲ್ಲಿ 56ಮಿ.ಮೀ, ನಾಯಂಡಹಳ್ಳಿಯಲ್ಲಿ 55ಮಿ.ಮೀ, ಹಗದೂರಿನಲ್ಲಿ 54ಮಿ.ಮೀ, ರಾಜರಾಜೇಶ್ವರಿ ನಗರದಲ್ಲಿ 53 ಮಿ.ಮೀ. ಮಳೆಯಾಗಿದೆ.

ಎಚ್‍ಎಸ್‍ಆರ್ ಲೇಔಟ್ ಮತ್ತು ವಿ.ನಾಗೇನಹಳ್ಳಿ 50.5 ಮಿ.ಮೀ, ರಾಜರಾಜೇಶ್ವರಿನಗರ 50.5 ಮಿ.ಮೀ, ಪುಲಕೇಶಿನಗರ 49.5 ಮಿ.ಮೀ, ಯಲಹಂಕ 49 ಮಿ.ಮೀ, ಅರಕೆರೆ 48.5 ಮಿ.ಮೀ, ದೊಡ್ಡನೆಕ್ಕುಂದಿ 4 5ಮಿ.ಮೀ, 44 ಮಿ.ಮೀ ಮಳೆ ದಾಖಲಾಗಿದೆ.

ಮಳೆ ಮುನ್ಸೂಚನೆ: ಬೆಂಗಳೂರು ಸೇರಿದಂತೆ ಮುಂದಿನ 24 ಗಂಟೆಗಳ ಕಾಲ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ರಾಯಚೂರು, ಚಿಕ್ಕಬಳ್ಳಾಪುರ, ಮೈಸೂರು ರಾಮನಗರ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಇದೆ. ಬೆಂಗಳೂರು ವ್ಯಾಪ್ತಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


 






 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News