ಬಿಟ್ ಕಾಯಿನ್ ಹಗರಣ ಪ್ರಕರಣ : ಇನ್‍ಸ್ಪೆಕ್ಟರ್ ಬಂಧನ

Update: 2024-05-29 15:23 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್‍ಸ್ಪೆಕ್ಟರ್ ಚಂದ್ರಾಧರ್ ಎಂಬುವರನ್ನು ಸಿಐಡಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸೈಬರ್ ಕ್ರೈಂ ಠಾಣೆ ಇನ್‍ಸ್ಪೆಕ್ಟರ್ ಆಗಿದ್ದ ಚಂದ್ರಾಧರ್, ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಸಿಐಡಿ ಪೊಲೀಸರು ಚಂದ್ರಾಧರ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಿ ಯಾನೆ ಶ್ರೀಕೃಷ್ಣ ಎಂಬುವನನ್ನು ಇತ್ತೀಚೆಗೆ ಸಿಐಡಿ ಬಂಧಿಸಿತ್ತು.

ಪ್ರಕರಣದ ಹಿನ್ನೆಲೆ: 2015ರಲ್ಲಿ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು. 2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ ಯೂನೋ ಕಾಯಿನ್ ಕಳವು ಪ್ರಕರಣ ದಾಖಲಾಗಿತ್ತು. ಯೂನೋಕಾಯಿನ್ ಟೆಕ್ನಾಲಜೀಸ್ ಕಂಪೆನಿಯ ಸಹ ಸಂಸ್ಥಾಪಕ ಬಿ.ವಿ.ಹರೀಶ್ ಎಂಬುವರು ಶ್ರೀಕಿ ವಿರುದ್ಧ ದೂರು ನೀಡಿದ್ದರು.

ಈ ಕಂಪೆನಿಯ 60.6 ಬಿಟ್ ಕಾಯಿನ್‍ಗಳನ್ನು ಕಳವು ಮಾಡಲಾಗಿದೆ. ಪ್ರತಿ ಬಿಟ್ ಕಾಯಿನ್ ಬೆಲೆ 1.67 ಲಕ್ಷ ರೂ.ನಂತೆ ಸುಮಾರು 1.14 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಕಳವು ಮಾಡಲಾಗಿದೆ ಎಂದು ಆರೋಪಿಸಿ ಅವರು ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸಿ ಆರೋಪಿ ಶ್ರೀಕಿಯನ್ನು ಬಂಧಿಸಿದ್ದರು. ಆತ ಜಾಮೀನಿನ ಮೇಲೆ ಹೊರಗಡೆ ಬಂದಿದ್ದನು. ಅನಂತರ ಸಿಸಿಬಿ ಪೊಲೀಸರ ವಿರುದ್ಧ ದಾಖಲೆಗಳನ್ನು ತಿರುಚಿರುವ ಆರೋಪಗಳು ಕೇಳಿಬಂದಿತ್ತು. ಹಾಗಾಗಿ, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು ಇತ್ತೀಚೆಗೆ ಪ್ರಮುಖ ಆರೋಪಿ ಶ್ರೀಕಿಯನ್ನು ಬಂಧಿಸಿದ್ದು, ಇದೀಗ ಪ್ರಕರಣದ ಈ ಹಿಂದಿನ ಇನ್‍ಸ್ಪೆಕ್ಟರ್ ಚಂದ್ರಾಧರ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News