ಹಳ್ಳ ಹಿಡಿದಿರುವ ಗ್ಯಾರಂಟಿಗಳನ್ನು ಸರಿದಾರಿಗೆ ತನ್ನಿ: ಕುಮಾರಸ್ವಾಮಿ

Update: 2024-02-05 13:44 GMT

ಬೆಂಗಳೂರು: ‘ಹಳ್ಳ ಹಿಡಿದಿರುವ ನಿಮ್ಮ ಗ್ಯಾರಂಟಿಗಳನ್ನು ಸರಿದಾರಿಗೆ ತನ್ನಿ. ಅವುಗಳ ವೈಫಲ್ಯವನ್ನು ಪರಾಮರ್ಶೆ ಮಾಡಿ. ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದ್ದರೆ ಮೊದಲು ಈ ಕೆಲಸ ಮಾಡಿ. ಅನ್ನಕ್ಕಾಗಿ ಜೀವತೆತ್ತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಆ ತಾಯಿಯ ಆರೋಗ್ಯ ಸುಧಾರಿಸಲಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ಎಕ್ಸ್ ನಲ್ಲಿ ಊಟವಿಲ್ಲದ ಯುವಕ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಅನ್ನಭಾಗ್ಯ, ಗೃಹಲಕ್ಷ್ಮಿ ಹೆಸರಿನಲ್ಲಿ ಲೋಕೋದ್ಧಾರ ಮಾಡಿದ್ದೇವೆ ಎಂದು ಸುಳ್ಳುಲೆಕ್ಕ ಕೊಟ್ಟು ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ನಿಮ್ಮ ಲೊಳಲೊಟ್ಟೆ ಬಯಲಾಗಿದೆ ಸಿದ್ದರಾಮಯ್ಯನವರೆ. ನುಡಿದಂತೆ ನಡೆದಿದ್ದೇವೆ ಎಂದರೆ ಇದೇನಾ ಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದ್ದಾರೆ.

‘ಅಧಿಕಾರದ ಮದವೇರಿ ಮಂಪರು ಬಿದ್ದಿರುವ ನಿಮ್ಮ ಕಂಗಳು ಆ ನತದೃಷ್ಟನ ಪ್ರಾಣಾರ್ಪಣೆಯಿಂದಲಾದರೂ ತೆರೆದುಕೊಳ್ಳಲಿ. ಇಲ್ಲವಾದರೆ, ಆ ಯುವಕನ ಸಾವಿನ ಶಾಪ ನಿಮಗೆ ತಟ್ಟದೇ ಬಿಡದು. ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮಿ? ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ? ನಾಚಿಕೆ, ಸಂಕೋಚ ಎನ್ನುವುದಿಲ್ಲವೇ? ಇದ್ದರೆ ಈ ಧಾರುಣಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತಾ?’ ಎಂದು ಹೇಳಿದ್ದಾರೆ.

‘ದುಡಿದು ತಾಯಿಯನ್ನು ಸಲಹಬೇಕೆಂದು ಕನಸು ಕಟ್ಟಿಕೊಂಡು ಹೊರಟ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು. ಟಿಕೆಟ್ ಇಲ್ಲದೆ ರೈಲಿನಿಂದ ಹೊರದಬ್ಬಿಸಿಕೊಂಡ ಈತ, ಧಾರವಾಡ ಆಳ್ನಾವರದಲ್ಲಿ ಹೆತ್ತಮ್ಮಗೆ ಅನ್ನ ಅರಸುತ್ತಾ, ದುಡಿಮೆ ಹುಡುಕುತ್ತಾ ಹೊರಟ. ಎಲ್ಲಿಯೂ ಅವಕಾಶ ಸಿಗದೆ ಕೈಚೆಲ್ಲಿ ನೇಣಿಗೆ ಕೊರಳು ಒಡ್ಡಿದ್ದಾನೆ. ಮೂರು ನಾಲ್ಕು ದಿನ ತಾಯಿ-ಮಗ ಇಬ್ಬರೂ ಅನ್ನಕ್ಕಾಗಿ ಪರಿತಪಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಈ ತಾಯಿಯ ಕುಟುಂಬಕ್ಕೆ ಅನ್ನಭಾಗ್ಯ ಏಕೆ ತಲುಪಿಲ್ಲ? ಗೃಹಲಕ್ಷ್ಮಿ ಅವರ ಮನೆ ಬಾಗಿಲಿಗೆ ಹೋಗಿಲ್ಲವೇಕೆ? ಇದಕ್ಕೆ ನೀವೇ ಹೊಣೆ ಸಿದ್ದರಾಮಯ್ಯನವರೇ. 15ನೆ ಬಜೆಟ್ ಮಂಡಿಸುವ ಉಮೇದಿನಲ್ಲಿರುವ ನೀವು ಈ ‘ಸತ್ತ ಸರಕಾರದ ಸಾಹುಕಾರನಷ್ಟೇ. ನಿಮ್ಮ ಸೋಗಲಾಡಿ ಸಮಾಜವಾದ ಬೆತ್ತಲಾಗಿದೆ. ಅನ್ನಕ್ಕಾಗಿ ಸಂಭವಿಸಿದ ಈ ಆತ್ಮಹತ್ಯೆ ಇಡೀ ನಾಡಿಗೇ ಕಪ್ಪುಚುಕ್ಕೆ. ಸ್ವತಃ ನೀವೇ ಈ ಯುವಕನ ಸಾವಿಗೆ ಕಾರಣ ಮತ್ತು ನೇರ ಹೊಣೆ. ರಾಜ್ಯಕ್ಕೆ ನೀವೇ ಸಮಜಾಯಿಷಿ ಕೊಡಬೇಕು ಹಾಗೂ ಶಾಂತವ್ವನಿಗೆ ತಕ್ಷಣವೇ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News