ಮರಣೋತ್ತರ ಪರೀಕ್ಷೆ ನಡೆಸದೇ ಮೃತದೇಹ ಸಾಗಿಸಲು ಅನುಮತಿ ; ವೈದ್ಯರ ಬಗ್ಗೆ ತನಿಖೆಗೆ ಜನವಾದಿ ಮಹಿಳಾ ಸಂಘಟನೆ ಆಗ್ರಹ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿದ್ದ ದೂರುದಾರ ಮಹಿಳೆಯು ದಿಢೀರ್ ಸಾವನ್ನಪ್ಪಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದೇ ಸಾಗಿಸಲು ಅನುಮತಿಸಿದ ವೈದ್ಯರ ವಿರುದ್ಧ ತನಿಖೆ ನಡೆಸುವಂತೆ ಅಖಿಲ ಭಾರತ ಮಹಿಳಾ ಸಂಘಟನೆಯು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ವರದಿಯಾಗಿದೆ.
ತಮ್ಮ ಅಪ್ರಾಪ್ತ ಪುತ್ರಿಯ ಮೇಲೆ ಮಾಜಿ ಸಿಎಂ ಯಡಿಯೂರಪ್ಪ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ಬೆಂಗಳೂರಿನ ಸದಾಶಿವ ನಗರ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ 2024 ಮಾರ್ಚ್ 14ರಂದು ಯಡಿಯೂರಪ್ಪ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣದ ದಾಖಲಾಗಿತ್ತು. ಅಲ್ಲದೆ, ಮಹಿಳೆಗೆ ದೂರು ವಾಪಸ್ ಪಡೆಯುವಂತೆ ಒತ್ತಡಗಳಿತ್ತು ಎಂದು ಜನವಾದಿ ಸಂಘಟನೆ ತಿಳಿಸಿದೆ.
ಮಹಿಳೆಯು, ಜನವಾದಿ ಮಹಿಳಾ ಸಂಘಟನೆಯನ್ನು ಇತ್ತೀಚೆಗೆ ಸಂಪರ್ಕಿಸಿದ್ದು, ಕಾನೂನು ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಸಂಘಟನೆಯು, ಹಿರಿಯ ವಕೀಲ ಎಸ್. ಬಾಲನ್ ಅವರನ್ನು ಸಂಪರ್ಕಿಸಿ, ಕಾನೂನು ಸೇವೆ ನೀಡುವಂತೆ ಮನವಿ ಮಾಡಿತ್ತು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕೇಸ್ ಮಾಹಿತಿಗಳನ್ನು ಪಡೆದುಕೊಂಡ ಬಾಲನ್ ಅವರು ಉಚಿತವಾಗಿ ಕಾನೂನು ಸೇವೆ ನೀಡಲು ಒಪ್ಪಿದ್ದರು ಎಂದು ಸಂಘಟನೆ ತಿಳಿಸಿದೆ.
ಈ ಬಗ್ಗೆ ದೂರವಾಣಿಯಲ್ಲಿ ಮೇ.25ರಂದು ದೂರುದಾರೆಯೊಂದಿಗೆ ಮಾತನಾಡಿದ್ದ ಬಾಲನ್ ಅವರು, ದಾಖಲೆಗಳೊಂದಿಗೆ ಕಚೇರಿಗೆ ಬರುವಂತೆ ಸೂಚಿಸಿದ್ದರು ಎನ್ನಲಾಗಿದೆ. ಈ ಮಧ್ಯೆ ಮೇ 26.ರಂದು ರವಿವಾರ ಸಂಜೆ ಹುಳಿಮಾವು ಆಸ್ಪತ್ರೆಯಲ್ಲಿ ದೂರುದಾರೆ ಮಹಿಳೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮಾಧ್ಯಮಗಳಲ್ಲಿ ಮಹಿಳೆಯು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಈ ಸಾವು ಅನುಮಾನ ಹುಟ್ಟಿಸುವಂತಿದೆ ಎಂದು ಸಂಘನೆಯು ಆರೋಪಿಸಿದೆ. ಆರೋಗ್ಯವಾಗಿದ್ದ ಮಹಿಳೆ ಏಕಾಏಕಿ ಶ್ವಾಸಕೋಶದ ಕ್ಯಾನ್ಸರ್ ನಿಂದ ನಿಧನರಾಗಲು ಹೇಗೆ ಸಾಧ್ಯ?. ಮರಣೋತ್ತರ ಪರೀಕ್ಷೆ ನಡೆಸದೇ ಮೃತದೇಹ ಸಾಗಿಸಲು ವೈದ್ಯರು ಅನುಮತಿ ನೀಡಿದ್ದು ಹೇಗೆ? ಎಂದೂ ಸಂಘಟನೆ ಪ್ರಶ್ನಿಸಿದೆ.
ಅಸಹಜ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂಘಟನೆಯು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದಿರುವ ಬಗ್ಗೆಯೂ ತನಿಖೆ ನಡೆಸಲು ಜನವಾದಿ ಮಹಿಳಾ ಸಂಘಟನೆ ದೂರಿನಲ್ಲಿ ಒತ್ತಾಯಿಸಿದೆ.