ರಾಜ್ಯಪಾಲರು ದೇಶದ್ರೋಹ ಕೆಲಸ ಮಾಡಿದ್ದಾರೆ: ಬಿ.ಟಿ.ಲಲಿತಾ ನಾಯಕ್
ಬೆಂಗಳೂರು : ಸಂವಿಧಾನಾತ್ಮಕವಾಗಿ ಆಯ್ಕೆರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ತನಿಖೆಗೆ ಆದೇಶ ನೀಡಿ ರಾಜ್ಯಪಾಲರು ದೇಶದ್ರೋಹ, ನಾಡದ್ರೋಹದ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ‘ಎದ್ದೇಳು ಕರ್ನಾಟಕ’ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಮುಡಾ ಪ್ರಕರಣ ತನಿಖೆ ಹಂತದಲ್ಲಿದ್ದೂ, ವರದಿ ಬರುವವರೆಗೂ ಕಾಯಬೇಕು. ಅದು ಬಿಟ್ಟು ಜನರಿಂದ ಆಯ್ಕೆಯಾದ ಸರಕಾರವನ್ನು ಆಡಳಿತ ನಡೆಸಲು ಬಿಡದೆ ಕಿರುಕಳ ನೀಡಿ, ಸರಕಾರ ಬೀಳಿಸಬೇಕೆಂದು ಉದ್ದೇಶದಿಂದ ಆರೋಪ ಮಾಡುವುದು ಸರಿ ಅಲ್ಲ ಎಂದು ಆಕ್ಷೇಪಿಸಿದರು.
ಯಾವುದೆ ಸರಕಾರ ಅಧಿಕಾರಕ್ಕೆ ಬಂದ ನಂತರ ಸಣ್ಣ-ಪುಟ್ಟ ತಪ್ಪುಗಳು ನಡೆಯುವುದು ಸಹಜ. ಅದನ್ನು ಸಾರ್ವಜನಿಕರು ಮತ್ತು ವಿಪಕ್ಷಗಳು ಆಡಳಿತ ಪಕ್ಷಕ್ಕೆ ತಪ್ಪನ್ನು ತಿದ್ದುಕೊಳ್ಳುವಂತೆ ಸಲಹೆ ನೀಡಿ, ಅವಕಾಶ ಮಾಡಿಕೊಡಬೇಕು. ಅದು ಬಿಟ್ಟು ಸರಕಾರವನ್ನೆ ಬುಡಮೇಲು ಮಾಡುವ ರೀತಿಯಲ್ಲಿ ಸರಕಾರದ ವಿರುದ್ಧ 24 ಗಂಟೆ ಕಾಲ ಯುದ್ದದ ರೀತಿಯಲ್ಲಿ ನಿಂಧಿಸಿಕೊಂಡು, ರಾಜ್ಯವನ್ನು ರಣರಂಗ ಮಾಡುತ್ತಿರುವ ಪ್ರತಿಪಕ್ಷಗಳ ನಡೆಯನ್ನು ಖಂಡಿಸುತ್ತೇವೆ ಎಂದು ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.
ರಾಜ್ಯ ಸರಕಾರ ಜನಪರ ಧಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳುವುದು ವಿಪಕ್ಷಗಳ ಜವಾಬ್ದಾರಿ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಆಳುವ ಪಕ್ಷದ ಮೇಲೆ ಒತ್ತಡ ಹಾಕಿ ಕೆಲಸ ಮಾಡಿದಾಗಲೇ ವಿರೋಧ ಪಕ್ಷ ಎಂದು ಕರೆಸಿಕೊಳ್ಳುವುದಕ್ಕೆ ಸಾಧ್ಯ. ಅದು ಬಿಟ್ಟು ಸರಕಾರವನ್ನು ಬೀಳಿಸಬೇಕೆನ್ನುವ ಷಡ್ಯಂತ್ರ ರಾಜಕಾರಣ ಮಾಡಬಾರದು ಮತ್ತು ಜನರು ನೆಮ್ಮದಿಯನ್ನು ಕಸಿದುಕೊಳ್ಳಬಾರದು ಎಂದು ಅವರು ದೂರಿದರು.
ರಾಜ್ಯಪಾಲರು ಕೇಂದ್ರ ಸರಕಾರದ ಏಜೆಂಟ್ ಆಗಿ ಕೆಲಸ ನಿರ್ವಹಿಸಬಾರದು. ಸಂವಿಧಾನಾತ್ಮಕವಾಗಿ ಆಯ್ಕೆಯಾಗಿ ಬಂದ ಮುಖ್ಯಮಂತ್ರಿಗೆ ಆದೇಶ ಕೊಡುವುದು ಸರಿಯಲ್ಲ. ಸಿದ್ದರಾಮಯ್ಯರ ವಿರುದ್ಧ ತನಿಖೆಗೆ ಆದೇಶ ನೀಡಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ, ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ ಮತ್ತಿತರ ವಿಚಾರದಲ್ಲೂ ಏಕೆ ಇಂತಹ ಆಸಕ್ತಿ ತೋರಿಸಲಿಲ್ಲ. ರಾಜ್ಯಪಾಲರು ಆದೇಶವನ್ನು ಹಿಂಪಡೆದು ತಮ್ಮ ತಪ್ಪನ್ನು ಕೂಡಲೆ ತಿದ್ದುಕೊಳ್ಳಬೇಕು, ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಲಲಿತಾ ನಾಯಕ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿ ರಾಜ್ಯಕಾರ್ಯದರ್ಶಿ ಕೆ.ಎಲ್.ಅಶೋಕ್, ದಸಂಸ ಮುಖಂಡ ಎನ್.ವೆಂಕಟೇಶ್, ಕ್ರೈಸ್ತ ಸಮುದಾಯದ ಮುಖಂಡ ಡಾ.ರೆವರೆಂಡ್ ಮನೋಹರ್, ಸೋಷಿಯಲಿಸ್ಟ್ ಸಮಾಜ ಪಾರ್ಟಿ ಮುಖಂಡ ಅಂಜನ್ ಮೂರ್ತಿ ಹಾಗೂ ಜನಶಕ್ತಿ ಪದಾಧಿಕಾರಿ ವರದರಾಜೇಂದ್ರ ಉಪಸ್ಥಿತರಿದ್ದರು.
"ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ವಿರುದ್ಧ ತನಿಖೆಗೆ ಆದೇಶ ನೀಡಿರುವುದು ಸಂವಿಧಾನ ಬಾಹಿರ, ಸಂವಿಧಾನಾತ್ಮಕ ಆಶಯಗಳನ್ನು ನುಚ್ಚು ನೂರು ಮಾಡುವ, ಪ್ರಜಾಪ್ರಭುತ್ವದ ವಿರೋಧಿ ನಡೆ ಆಗಿದೆ. ಜನರಿಂದ ಆಯ್ಕೆಯಾಗಿರುವ ಸಿಎಂ ರಾಜೀನಾಮೆ ಕೇಳುವುದನ್ನು ವಿರೋಧಿಸುತ್ತೇವೆ. ಇದು ಯಾವುದೆ ಪಕ್ಷದ ವ್ಯಕ್ತಿಯ ಉಳಿವಿನ ಪ್ರಶ್ನೆ ಅಲ್ಲ, ಸಂವಿಧಾನ, ಪ್ರಜಾಪ್ರಭುತ್ವದ ಆಶಯದ ಪ್ರಶ್ನೆ ಆಗಿದೆ"
-ಕೆ.ಎಲ್.ಅಶೋಕ್, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ