ಚಿಕ್ಕಬಳ್ಳಾಪುರ | ಜಲಾಶಯದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮೃತ್ಯು
Update: 2025-04-02 20:39 IST
ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಬುಧವಾರ ಸಂಭವಿಸಿದೆ.
ರಮಝಾನ್ ರಜೆಯ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ತಾಲೂಕಿನ ಶ್ರೀನಿವಾಸ ಸಾಗರಕ್ಕೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಮತ್ತು ಒರ್ವ ಪುರುಷ ಸೇರಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರು ದೇವನಹಳ್ಳಿ ಮೂಲದ ಇಮ್ರಾನ್ (41) ಬಷೀರಾ (42) ಹಾಗೂ ಫರ್ಹಿನ್ (35) ಎಂದು ತಿಳಿದು ಬಂದಿದೆ. ನೀರಿನಲ್ಲಿ ಮುಳುಗಿದ್ದ ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವೀಕ್ಷಣೆ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದು ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.