ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ; ಬಾಗೇಪಲ್ಲಿಯಲ್ಲಿ ನಡೆದ ಆಘಾತಕಾರಿ ಘಟನೆ
ಬಾಗೇಪಲ್ಲಿ : ಹಳೇ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತಾಲ್ಲೂಕಿನ ಕಮ್ಮರವಾರಪಲ್ಲಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಗಂಗಾಧರ ಎಂದು ಗುರುತಿಸಲಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಕಮ್ಮರವಾರಪಲ್ಲಿ ಗ್ರಾಮದ ಗಂಗಾಧರ ಅವರು ಆ.27ರಂದು ರಾತ್ರಿ 11.30 ಸಮಯದಲ್ಲಿ ತಮ್ಮ ಜಮೀನಿನ ಬಳಿ ನಡೆದುಕೊಂಡು ಹೋಗುತ್ತಿರುವಾಗ, ಅದೇ ಗ್ರಾಮದ ಅವರ ದಾಯಾದಿಗಳಾದ ಪೋತುಲಪ್ಪ, ಗಂಗುಲಪ್ಪ, ಕದಿರಪ್ಪ, ಗಂಗಾಧರಪ್ಪ, ನಂಜುಂಡಪ್ಪ, ಮುರಳಿ ಎಂಬುವವರು ಹಳೇ ವೈಷಮ್ಯದಿಂದ ವಿನಾಕಾರಣ ತಗಾದೆ ತೆಗೆದು ʼನಮ್ಮ ಕೊತ್ತಂಬರಿ ತೋಟಕ್ಕೆ ನೀನೇ ಕಳೆ ನಾಶಕ ಸಿಂಪಡಿಸಿ ಇಡೀ ತೋಟವನ್ನಲ್ಲೇ ಹಾಳು ಮಾಡಿದ್ದೀಯಾʼ ಎಂದು ಜಗಳ ತೆಗೆದು ಸ್ಥಳದಲ್ಲಿಯೇ ಹಲ್ಲೆ ಮಾಡಿದ್ದಾರೆ. ಮತ್ತೆ ಮಾರನೇ ದಿನ ಆ.28ರಂದು ಗಂಗಾಧರ ಅವರನ್ನು ಗ್ರಾಮದ ರಾಮಸ್ವಾಮಿ ದೇವಾಲಯದ ಬಳಿಯ ವಿದ್ಯುತ್ ಕಂಬಕ್ಕೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30 ರವರೆಗೆ ಕಟ್ಟಿ ಹಾಕಿ ಥಳಿಸಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.
ಬಳಿಕ ಪಟ್ಟಣದ ಪೋಲೀಸ್ ಠಾಣೆಗೆ ಎಳೆದುಕೊಂಡು ಬಂದು ಪೋಲೀಸರಿಗೆ ಒಪ್ಪಿಸಿ ಗಂಗಾಧರನ ವಿರುದ್ದ ಸುಳ್ಳು ಹೇಳಿ ಪ್ರಕರಣ ದಾಖಲು ಮಾಡಿಸಿದ್ದಾರೆ. ನಂತರ ಹಲ್ಲೆಗೊಳಗಾದ ಗಂಗಾಧರ ಅಣ್ಣನಾದ ನರಸರಾಮಪ್ಪ ಎಂಬುವವರು ನನ್ನ ತಮ್ಮ ಇಂತಹ ನೀಚ ಕೆಲಸ ಮಾಡಿಲ್ಲ. ನಮಗೆ ನ್ಯಾಯ ಒದಗಿಸಿ ಎಂದು ರಾಜ್ಯ ಮಾನವ ಹಕ್ಕುಗಳ ಸಮಿತಿ, ಚಿಕ್ಕಬಳ್ಳಾಪುರ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಹಾಗೂ ಬಾಗೇಪಲ್ಲಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂದ ಪೋಲೀಸರು 2 ಕಡೆ ಪ್ರಕರಣ ದಾಖಲು ಮಾಡಿ ತೀವ್ರ ತನಿಖೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
"ಘಟನೆಗೆ ನಾನು ಕಾರಣ ಎಂದು ನನ್ನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. ನಾನು ಯಾವುದೇ ಕಾರಣಕ್ಕೂ ನಮ್ಮ ದಾಯಾದಿಗಳ ಕೊತ್ತಂಬರಿ ತೋಟಕ್ಕೆ ಹೋಗಿಲ್ಲ. ಕಳೆ ನಾಶಕ ಸಿಂಪಡಿಸಿಲ್ಲ. ನಂಜುಂಡಪ್ಪ, ಗಂಗುಲಪ್ಪನ ಹೆಂಡತಿ ಅಮರಾವತಿ ಅವರು ಆ.29ರಂದು ಅವರ ಜಮೀನಿನ ಸ್ವಲ್ಪ ಭಾಗಕ್ಕೆ ಕೊತ್ತಂಬರಿ ಬೆಳೆಗೆ ಸ್ವತಃ ಕಳೆ ನಾಶಕ ಸಿಂಪಡಿಸಿಕೊಂಡು ನನ್ನ ಮೇಲೆ ಆರೋಪ ಮಾಡಿದ್ದಾರೆ. ಒಂದು ವೇಳೆ ನಾನು ಅವರ ಕೊತ್ತಂಬರಿ ಸೊಪ್ಪಿಗೆ ಕಳೆ ನಾಶಕ ಹಾಕಿದ್ದರೆ ನನ್ನನ್ನು ಜೈಲಿಗೆ ಕಳುಹಿಸಲಿ” ಎಂದು ತೀವ್ರ ಹಲ್ಲೆಗೊಳಗಾದ ಕೆ.ಜಿ.ಗಂಗಾಧರ ಅಳಲನ್ನು ತೋಡಿಕೊಂಡರು.