ಚಿಕ್ಕಬಳ್ಳಾಪುರ | ಅಪಘಾತಕ್ಕೀಡಾದ ಕಾರು ಬೆಂಕಿಗಾಹುತಿ: ಇಬ್ಬರು ಸಜೀವ ದಹನ
Update: 2025-03-09 11:55 IST
ಚಿಕ್ಕಬಳ್ಳಾಪುರ: ಕಾರು ಮತ್ತು ಬಸ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ತಾಲೂಕು ಕಂಚರ್ಲ ಹಳ್ಳಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಚಿಂತಾಮಣಿ- ಮದನಪಲ್ಲಿ ಮಾರ್ಗದ ಗೋಪಲ್ಲಿ ಬಳಿ ರವಿವಾರ ಬೆಳಗ್ಗೆ ಸಂಭವಿಸಿದೆ.
ಆಂಧ್ರ ಪ್ರದೇಶದ ಕಡಪ ಮೂಲದ ಧನಂಜಯ ರೆಡ್ಡಿ(50) ಹಾಗೂ ಕಲಾವತಿ(42) ಮೃತಪಟ್ಟವರು ಎಂದು ತಿಳಿದುಬಂದಿದೆ.
ಗೋಪಲ್ಲಿ ಬಳಿ ಇಂದು ಬೆಳಗ್ಗೆ ಕಾರು ಮತ್ತು ಬಸ್ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಅದರೊಳಗೆ ಸಿಲುಕಿದ ಧನಂಜಯ ರೆಡ್ಡಿ ಮತ್ತು ಕಲಾವತಿ ಸಜೀವ ದಹನಗೊಂಡಿದ್ದಾರೆ.
ಅಪಘಾತಕ್ಕೀಡಾದ ಬಸ್ ಕೂಡಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಹೊರ ಹೋಗಿ ಉರುಳಿಬಿದ್ದಿದೆ.
ಘಟನಾ ಸ್ಥಳಕ್ಕೆ ಕಂಚರ್ಲ ಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ.