ಮುನಿರತ್ನ ದುಷ್ಕೃತ್ಯಕ್ಕೆ ಆರ್.ಅಶೋಕ್, ಎಚ್‌ಡಿಕೆ ಕುಮ್ಮಕ್ಕು : ಸಚಿವ ಕೃಷ್ಣ ಬೈರೇಗೌಡ

Update: 2024-09-20 13:47 GMT

ಚಿಕ್ಕಬಳ್ಳಾಪುರ : ಶಾಸಕ ಮುನಿರತ್ನ ಅವರ ದುಷ್ಕೃತ್ಯವನ್ನು ಖಂಡಿಸದೆ ಆರ್.ಅಶೋಕ್‌, ಎಚ್.ಡಿ. ಕುಮಾರಸ್ವಾಮಿ ಸುಮ್ಮನೆ ಇದ್ದಾರೆ. ಇವರ ಕುಮ್ಮಕ್ಕು ಇಲ್ಲದೆ ಇಷ್ಟೆಲ್ಲ ನಡೆಯುತ್ತದೆಯೇ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಮಾಡಿದ್ದು ತಪ್ಪು ಎಂದು ಇವರು ಎಲ್ಲಿಯೂ ಮಾತನಾಡಿಲ್ಲ. ಮುನಿರತ್ನ ಭ್ರಷ್ಟಾಚಾರಿ, ಮನೆಯಲ್ಲಿಯೇ ಬಿಬಿಎಂಪಿ ಬಿಲ್ ಬರೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಆದರೆ ಈಗ ಹನಿಟ್ರ್ಯಾಪ್ ನಡೆಸುತ್ತಾರೆ ಎನ್ನುವ ಆಘಾತಕಾರಿ ಅಂಶ ತಿಳಿದು ಬಂದಿದೆ ಎಂದು ಹೇಳಿದರು.

ಅಧಿಕಾರಿಗಳು, ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಇದಕ್ಕೆ ಏಡ್ಸ್ ಇರುವವರನ್ನೇ ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತೆಯೇ ದೂರು ನೀಡಿದ್ದಾರೆ. ಇಷ್ಟೆಲ್ಲ ಕಂಡು ಬಂದರೂ ಬಿಜೆಪಿಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೇ.100ರಷ್ಟು ಸಾಚ ಯಾರೂ ಇಲ್ಲ. ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ಮುನಿರತ್ನ ಮಾಡಿರುವುದು ಸರಿಯೇ ಎಂದು ಯೋಚಿಸಲಿ. ಇಷ್ಟೆಲ್ಲಾ ಹೊರ ಬಂದಿದ್ದರೂ ಬೆಂಬಲವಾಗಿ ನಿಂತವರೂ ಸಹ ಅಪರಾಧದ ಭಾಗವಾಗಿದ್ದಾರೆ ಎಂದು ಹೇಳಿದರು.

ಮುನಿರತ್ನ ಒಕ್ಕಲಿಗ ಸಮಾಜದ ಅವಹೇಳನ ಮಾಡಿದ್ದಾರೆ. ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇವೆ. ಒಕ್ಕಲಿಗ ಸಮಾಜದ ಮೇಲೆ ದಾಳಿ ನಡೆದಾಗ ಸಮುದಾಯ ಎಚ್ಚೆತ್ತುಕೊಂಡು ಒಂದು ಧ್ವನಿಯಲ್ಲಿ ಖಂಡಿಸಬೇಕು. ಸಮಾಜವು ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಗೌರವ ಕೊಡುತ್ತದೆ. ಅವರ ನೇತೃತ್ವದಲ್ಲಿ ಖಂಡನಾ ನಿರ್ಣಯ ಸಭೆ ಆಗಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಸ್ವಾಮೀಜಿ ಅವರ ತೀರ್ಮಾನವೇ ಅಂತಿಮ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News