ಚಿಕ್ಕಬಳ್ಳಾಪುರ: ಮೂರು ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳು ಕಳವು
ಚಿಕ್ಕಬಳ್ಳಾಪುರ: ಉತ್ತರ ಪ್ರದೇಶದ ನೋಯ್ಡಾದಿಂದ ಬೆಂಗಳೂರಿಗೆ ಕಂಟೈನರ್ ನಲ್ಲಿ ಸಾಗಿಸುತ್ತಿದ್ದ ಸುಮಾರು ಮೂರು ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳು ಕಳವಾಗಿರುವ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ.ಐ. ಕಂಪೆನಿಯು ಒಟ್ಟು 6,660 ಮೊಬೈಲ್ ಫೋನ್ ಗಳನ್ನು ನೋಯ್ಡಾದಿಂದ ಕಂಟೈನರ್ ಮೂಲಕ ಬೆಂಗಳೂರಿಗೆ ಸಾಗಿಸುತ್ತಿತ್ತು. ಆದರೆ ನಿಗದಿತ ಸಮಯಕ್ಕೆ ಕಂಟೈನರ್ ಬೆಂಗಳೂರು ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಕಂಪೆನಿ ಸಿಬ್ಬಂದಿ ಕಂಟೈನಲ್ಲಿರುವ ಜಿಪಿಎಸ್ ಲೊಕೇಶನ್ ಆಧರಿಸಿ ಹುಡುಕಾಟ ನಡೆಸಿದ್ದಾರೆ. ಆಗ ಕಂಟೈನರ್ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲಾರಹಳ್ಳಿ ಗ್ರಾಮದ ಕ್ರಾಸ್ ಬಳಿ ನಿಂತಿರುವುದು ಪತ್ತೆಯಾಗಿದೆ. ಆದರೆ ಕಂಟೈನರ್ ನಲ್ಲಿದ್ದ ಸುಮಾರು ಮೂರ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳು ಕಳವಾಗಿದ್ದವು. ಅದರ ಚಾಲಕ ರಾಹುಲ್ ಕೂಡಾ ನಾಪತ್ತೆಯಾಗಿದ್ದಾನೆ ಎಂದು ಕಂಪೆನಿ ವ್ಯವಸ್ಥಾಪಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಕಂಪೆನಿಯು ಕಂಟೈನರ್ ಚಾಲಕನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದೆ. ಪೆರೇಸಂದ್ರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.