‘ಓದುವ ಬೆಳಕು’ ಕಾರ್ಯಕ್ರಮದಡಿ ಅರಿವು ಕೇಂದ್ರಗಳಲ್ಲಿ ಮಕ್ಕಳ ದಿನಾಚರಣೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ, ಗ್ರಾಮೀಣ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿರುವ ಓದುವ ಬೆಳಕು ಕಾರ್ಯಕ್ರಮದಡಿ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳಲ್ಲಿ ನವೆಂಬರ್ 14ರಂದು ‘ಮಕ್ಕಳ ದಿನಾಚರಣೆ' ಕಾರ್ಯಕ್ರಮ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಅದೇ ರೀತಿ ನ.20 ರಂದು ಅಂತರ್ರಾಷ್ಟ್ರೀಯ ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಯಕ್ರಮಗಳನ್ನು ಆಚರಿಸಲಾಗುವುದು. ಮಕ್ಕಳ ಸೃಜನಶೀಲತೆ ಮತ್ತು ಗ್ರಹಿಸುವಿಕೆ ಸಾಮಥ್ರ್ಯವನ್ನು ವೃದ್ಧಿಸಲು ಈ ತಿಂಗಳು ಕಡಲತೀರದ ದೃಶ್ಯ, ಮಾರುಕಟ್ಟೆ, ಜಾತ್ರೆ, ಆಟದ ಮೈದಾನ ಮತ್ತು ಮಕ್ಕಳು ಆನಂದಿಸುವ ಇತರ ಸ್ಥಳಗಳಂತಹ ವರ್ಣರಂಜಿತ ಚಿತ್ರಗಳನ್ನು ಮುದ್ರಿಸಿ ಮಕ್ಕಳಿಗೆ ವಿವರಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳು ಇಂತಹ ಚಿತ್ರಗಳ ಬಗ್ಗೆ ತಮ್ಮ ಸ್ನೇಹಿತರಿಗೆ ವಿವರಿಸಲು ಅಥವಾ ಚರ್ಚೆ ನಡೆಸಲು ಹಾಗೂ ಈ ವಸ್ತುವನ್ನು ಇರಿಸಿಕೊಂಡು ಕಥೆಯನ್ನು ರಚಿಸಲು ಉತ್ತೇಜನ ನೀಡಲಾಗುವುದು ಎಂದು ಹೇಳಿದ್ದಾರೆ.