ಬೆಂಗಳೂರು | ಲಾಕಪ್‍ಡೆತ್ ಪ್ರಕರಣ : ನಾಲ್ವರು ಪೊಲೀಸರಿಗೆ 7 ವರ್ಷ ಜೈಲು ಶಿಕ್ಷೆ

Update: 2024-11-27 12:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು : ಪ್ರಕರಣವೊಂದರ ಸಂಬಂಧ ವಿಚಾರಣೆ ನೆಪದಲ್ಲಿ ವಶಕ್ಕೆ ಪಡೆದಿದ್ದ ವ್ಯಕ್ತಿಯ ʼಲಾಕಪ್‍ಡೆತ್ʼ ಪ್ರಕರಣದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಸಿಐಡಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಹಿಂದೆ ಇಲ್ಲಿನ ಜೀವನ್ ಭೀಮಾನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಹೆಡ್ ಕಾನ್‌ಸ್ಟೇಬಲ್‌ ಏಜಾಝ್ ಖಾನ್, ಕಾನ್‌ಸ್ಟೇಬಲ್‌ಗಳಾದ ಕೇಶವ ಮೂರ್ತಿ, ಮೋಹನ್ ರಾಮ್ ಹಾಗೂ ಸಿದ್ದಪ್ಪ ಬೊಮ್ಮನಹಳ್ಳಿ ಎಂಬುವರು ಶಿಕ್ಷೆಗೆ ಗುರಿಯಗಿದ್ದು, ಓರ್ವರಿಗೆ 30 ಸಾವಿರ ಹಾಗೂ ಮೂವರಿಗೆ ತಲಾ 25 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.

ಜೀವನ್ ಭೀಮಾನಗರ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿದ್ದ ಒಡಿಶಾ ಮೂಲದ ಮಹೇಂದ್ರ ರಾಥೋಡ್ (42)ನನ್ನು 2016ರ ಮಾ.19ರಂದು ಠಾಣೆಗೆ ಕರೆತರಲಾಗಿತ್ತು. ಸಂಜೆ ವೇಳೆಗೆ ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು.

ಈ ಘಟನೆಗೆ ಪೊಲೀಸ್ ಸಿಬ್ಬಂದಿಯ ನಿರ್ಲಕ್ಷ್ಯತೆ ಹಾಗೂ ದೈಹಿಕವಾಗಿ ಹಲ್ಲೆ ಮಾಡಿದ್ದರ ಪರಿಣಾಮವಾಗಿ ಆತನು ಪೊಲೀಸ್ ವಶದಲ್ಲಿದ್ದಾಗ ಮೃತಪಟ್ಟಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿತ್ತು. ತದನಂತರ, ನಾಲ್ವರು ಸಿಬ್ಬಂದಿ ವಿರುದ್ಧ 2019ರಲ್ಲಿ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದರು.

ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕೃಷ್ಣವೇಣಿ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ಸಿಐಡಿ ವಿಶೇಷ ನ್ಯಾಯಾಲಯ ಆರೋಪಿತ ಪೊಲೀಸ್ ಸಿಬ್ಬಂದಿಯನ್ನು ದೋಷಿಗಳೆಂದು ಪರಿಗಣಿಸಿ ತೀರ್ಪು ನೀಡಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News