ಅಂದುಕೊಂಡಂತೆ ಕನ್ನಡ ಭಾಷೆ ಬೆಳೆಯುತ್ತಿಲ್ಲ: ಪ್ರೊ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ‘ನಾವೆಲ್ಲರೂ ಅಂದುಕೊಂಡ ಹಾಗೆ ಕನ್ನಡ ಭಾಷೆ ಬೆಳೆಯುತ್ತಿಲ್ಲʼ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಸುರಾನ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡ ರಾಜ್ಯೋತ್ಸವ ಮತ್ತು ಇಂದಿರಾ ರತ್ನ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಅನೇಕ ಕನ್ನಡ ಶಾಲೆಗಳು ಮುಚ್ಚಿಹೋಗಿದ್ದಾವೆ. ಹಲವು ಖಾಸಗಿ ಶಾಲೆಗಳು ಕನ್ನಡ ಭಾಷೆಯನ್ನು ಹೊರ ಹಾಕುವುದಕ್ಕೆ ಕಾದು ನಿಂತಿವೆ ಎಂದು ಹೇಳಿದರು.
ಶಿಕ್ಷಣ ಸಚಿವರು ಕನ್ನಡ ಶಾಲೆಗಳು ಉಳಿಯಬೇಕೆಂದರು. ಆದರೆ, ಇದೇ ವೇಳೆ 1,439 ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿದರು. ಇದರಿಂದಾಗಿ 439 ಸರಕಾರಿ ಶಾಲೆಗಳು ಮುಚ್ಚಿಹೊದವು. ಕನ್ನಡ ಶಿಕ್ಷಕರು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಹೇಳಿಕೊಟ್ಟರೆ ಕನ್ನಡ ಹೇಳಿಕೊಡುವ ಬೆಳವಣಿಗೆ 50 ವರ್ಷಗಳ ಹಿಂದಕ್ಕೆ ಹೋಗುತ್ತದೆ ಎಂದು ಪುರುಷೋತ್ತಮ್ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.
ಇಂತಹ ಸ್ಥಿತಿಯಲ್ಲಿ ಕನ್ನಡ ಭಾಷೆ ಇರಬೇಕಾದರೆ, ಕನ್ನಡ ಭಾಷೆ, ಭವಿಷ್ಯ ಉಳಿಸಿಕೊಳ್ಳುವುದಕ್ಕೆ ಯೋಜನೆಗಳನ್ನು ರೂಪಿಸಿ ಕೆಲಸ ಮಾಡಲು ಎಲ್ಲರೂ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕನ್ನಡ ಉಳಿಯುವುದಿಲ್ಲ. ಹೊಸ ಜನಗಣತಿ ಬಂದಾಗ ಲೋಕಸಭೆಯ ಪುನರ್ ವಿಂಗಡಣೆ ಬರುತ್ತದೆ. ಹಿಂದಿನ ಜನಗಣತಿಗಳ ಪ್ರಕಾರ ಭಾಷೆಗೂ ಜನಸಂಖ್ಯೆಗೂ ಸಂಬಂಧವಿದೆ. ಹಿಂದಿನ ಜನಗಣತಿ ಗಮನಿಸಿದರೆ ಹಿಂದಿ ಭಾಷೆ ಶೇ.66ರಷ್ಟು ವೇಗದಲ್ಲಿ ಬೆಳೆಯುತ್ತಿದೆ. ಕನ್ನಡ ಭಾಷೆ ಶೇ.3.7ರಲ್ಲಿ ಮಾತ್ರ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ರಂಗೋಲಿಯಲ್ಲಿ ಎಷ್ಟು ಬಣ್ಣಗಳು ಇರುತ್ತವೋ, ರಂಗೋಲಿ ಅಷ್ಟು ಚಂದವಾಗಿ ಕಾಣುತ್ತದೆ. ಅದೇ ರೀತಿ ಭಾರತವೆಂಬುದು ಭಾಷೆಗಳ ರಂಗೋಲಿ. ಎಷ್ಟು ಭಾಷೆಗಳು ಇರುತ್ತವೋ, ದೇಶ ಅಷ್ಟು ಚೆನ್ನಾಗಿರುತ್ತದೆ ಎಂದು ಪುರುಷೋತ್ತಮ್ ಬಿಳಿಮಲೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೆಸಿಡೆನ್ಸಿ ವಿವಿಯ ಕನ್ನಡ ಪ್ರಾಧ್ಯಾಪಕಿ ಡಾ.ಮಲರ್ ವಿಳಿ ಕೆ. ಅವರಿಗೆ ಇಂದಿರಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಾನಪದ ಗಾಯಕಿ ಸವಿತಕ್ಕ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ, ಪ್ರೆಸಿಡೆನ್ಸಿ ವಿವಿಯ ಕನ್ನಡ ಪ್ರಾಧ್ಯಾಪಕಿ ಡಾ.ಮಲರ್ ವಿಳಿ ಕೆ., ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ, ಪ್ರಾಧ್ಯಾಪಕಿ ಡಾ.ವತ್ಸಲಾ ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.