ಬೆಂಗಳೂರಿನಲ್ಲಿ ಕಾಲರಾ ರೋಗ ಪತ್ತೆ; ಹೋಟೆಲ್‌ಗಳಲ್ಲಿ ಕುಡಿಯಲು ಕಾಯಿಸಿದ ನೀರು ಬಳಕೆ ಕಡ್ಡಾಯ :ಬಿಬಿಎಂಪಿ

Update: 2024-04-05 09:18 GMT

ಬೆಂಗಳೂರು, ಏ‌.5- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಲರಾ ರೋಗ ಪತ್ತೆ ಹಿನ್ನೆಲೆ ಕಡ್ಡಾಯವಾಗಿ ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳ ಮಾಲೀಕರಿಗೆ, ಗ್ರಾಹಕರಿಗೆ ಕುಡಿಯಲು ಕಾಯಿಸಿದ ನೀರನ್ನು ವಿತರಿಸಲು ಬಿಬಿಎಂಪಿ ಸೂಚಿಸಿದೆ.

ಹರುಡುವಿಕೆಯನ್ನು ನಿಭಾಯಿಸಲು ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ವೈದ್ಯಾಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಆದೇಶಿಸಿದ್ದಾರೆ.

ರೋಗ ಹರುಡುವಿಕೆಯನ್ನು ನಿಭಾಯಿಸಲು ವಿಧಾನಸಭಾ ಕ್ಷೇತ್ರವಾರು, ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಲು ಎಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಅದರಲ್ಲೂ,ನಗರದಲ್ಲಿರುವ ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳ ಮಾಲೀಕರಿಗೆ, ಗ್ರಾಹಕರಿಗೆ ಕುಡಿಯಲು ಕಾಯಿಸಿದ ನೀರನ್ನು ವಿತರಿಸಲು ಸಲಹೆ ನೀಡಲಾಗಿದೆ.

ಪಾಲಿಕೆಯ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಖಾಸಗಿ ಲ್ಯಾಬ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಆಸ್ಪತ್ರೆ, ಜನರಲ್ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಅಡಿಯಲ್ಲಿ ಬರುವ ಆಸ್ಪತ್ರೆಗಳು ಶಂಕಿತ ಪ್ರಕರಣಗಳು ವರದಿಯಾದಲ್ಲಿ ಸರ್ಕಾರ ನಿಗದಿಪಡಿಸಿರುವ ಐಹೆಚ್ಐಪಿ ತಂತ್ರಾಶದಲ್ಲಿ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚಿಸಲಾಗಿದೆ.

ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಾಗಿ ನೀರಿನ ಮಾದರಿಗಳನ್ನು ಹಿರಿಯ ಆರೋಗ್ಯ ಪರಿವೀಕ್ಷಕರು ಸಂಗ್ರಹಿಸಿ ಲ್ಯಾಬ್‌ಗೆ ಪ್ರತಿನಿತ್ಯ ಕಳುಹಿಸಲು ಸೂಚಿಸಲಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಆರ್ ಎಸ್ ಕಾರ್ನರ್‌ ಗಳನ್ನು ಸ್ಥಾಪಿಸುವ ಮೂಲಕ ಆಸ್ಪತ್ರೆಗೆ ಬರುವ ಹೊರರೋಗಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಶಿಕ್ಷಣ ನೀಡಲೂ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News