ಹೊಸ ಅಪರಾಧ ಕಾನೂನ್ನು ಸರಿಯಾಗಿ ತಿಳಿದುಕೊಂಡು ಪ್ರಕರಣ ದಾಖಲಿಸಿ : ಪೊಲೀಸ್ ಆಯುಕ್ತ ಬಿ.ದಯಾನಂದ್

Update: 2024-07-04 16:19 GMT

ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರು: ಮೂರು ಹೊಸ ಅಪರಾಧ ಕಾನೂನುಗಳು ಅನುಷ್ಠಾನಗೊಂಡಿರುವ ಕಾರಣ ಸೂಕ್ತ ತರಬೇತಿ ಪಡೆದರೂ ಪೊಲೀಸರಲ್ಲಿ ಗೊಂದಲವಿದ್ದಲ್ಲಿ, ಸರಿಯಾಗಿ ತಿಳಿದುಕೊಂಡು ಸೆಕ್ಷನ್‍ಗಳನ್ನು ಹಾಕಬೇಕು ಎಂದು ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮೌಖಿಕ ಸೂಚನೆ ನೀಡಿದ್ದಾರೆ.

ಜುಲೈ 1ರಿಂದ ಐಪಿಸಿ ಹಾಗೂ ಸಿಆರ್ ಪಿಸಿ ಕಾಯ್ದೆಗೆ ಪರ್ಯಾಯವಾಗಿ ಬಿಎನ್‍ಎಸ್, ಬಿಎನ್‍ಎಸ್‍ಎಸ್ ಕಾಯ್ದೆಗಳು ಜಾರಿಯಾಗಿವೆ. ಇದರ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಸಿಬ್ಬಂದಿಗೆ ಗೊಂದಲವಾಗದಂತೆ ಪ್ರತ್ಯೇಕ ಪೊಲೀಸ್ ಆ್ಯಪ್ ರಚಿಸಲಾಗಿದೆ. ಹೀಗಿದ್ದರೂ ಕೆಲವು ಸಂದರ್ಭಗಳಲ್ಲಿ ಗೊಂದಲ ಉಂಟಾದರೆ ನುರಿತ ವಕೀಲರು ಅಥವಾ ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ಬಳಿ ಕೇಳಿ ಸೆಕ್ಷನ್‍ಗಳ ಬಗ್ಗೆ ತಿಳಿದುಕೊಂಡು ಪ್ರಕರಣ ದಾಖಲಿಸಬೇಕು ಎಂದು ಬಿ.ದಯಾನಂದ್ ತಿಳಿಸಿದ್ದಾರೆ.

ಆರೋಪಿಗಳ ಮೇಲೆ ಬರುವುದು ಆರೋಪಗಳಷ್ಟೇ, ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸೆಕ್ಷನ್‍ಗಳನ್ನು ನಮೂದಿಸಿ. ಉದ್ದೇಶಪೂರ್ವಕವಲ್ಲದಿದ್ದರೂ ತಪ್ಪಾಗಿ ಸೆಕ್ಷನ್ ಹಾಕಿದರೆ ಆರೋಪಿಗೂ ತೊಂದರೆಯಾಗಬಹುದು. ಆರೋಪಿ ಅಪರಾಧ ಮಾಡದಿದ್ದಲ್ಲಿ ಆ ಸೆಕ್ಷನ್‍ಗಳನ್ನು ಬಳಸಿದರೆ ತೊಂದರೆಗಳಾಗಬಹುದು ಎಂದು ಬಿ.ದಯಾನಂದ್ ಹೇಳಿದ್ದಾರೆ.

ಜನರಿಗೆ ನ್ಯಾಯ ಸಿಗುವ ಉದ್ದೇಶದಿಂದ ಸರಿಯಾಗಿ ತಿಳಿದುಕೊಂಡು ಪ್ರಕರಣ ದಾಖಲಿಸಿಕೊಳ್ಳಬೇಕು. ಸಹಜವಾಗಿ, ಹೊಸ ಕಾಯ್ದೆಗಳು ಪೊಲೀಸರಲ್ಲಿ ಗೊಂದಲ ಮೂಡಿಸಬಹುದು. ಇದು ತಪ್ಪೆಂದಲ್ಲ. ತರಬೇತಿ ಪಡೆದರೂ ಕೆಲವು ಸಂದರ್ಭಗಳಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ಹೀಗಾಗಿ ತಜ್ಞರೊಂದಿಗೆ ಕೇಳಿ ತಿಳಿದುಕೊಂಡು ಹೊಸ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಬಿ.ದಯಾನಂದ್ ಪೊಲೀಸರಿಗೆ ಕಿವಿಮಾತು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News