‘ಹಾಸನ ಚಲೋ’ಗೆ ಸಮುದಾಯ ಬೆಂಗಳೂರು ಹಾಗೂ ಸಮುದಾಯ ಕರ್ನಾಟಕ ಬೆಂಬಲ

Update: 2024-05-29 15:21 GMT

 ಪ್ರಜ್ವಲ್ ರೇವಣ್ಣ

ಬೆಂಗಳೂರು : ‘ಹಾಸನದ ಪ್ರಗತಿಪರ ಸಂಘಟನೆಗಳ ಒಕ್ಕೂಟ’ವು ಮೇ30ರಂದು ಹಮ್ಮಿಕೊಂಡಿರುವ ಹಾಸನ ಚಲೊ ಹೋರಾಟಕ್ಕೆ ಸಮುದಾಯ ಬೆಂಗಳೂರು ಹಾಗೂ ಸಮುದಾಯ ಕರ್ನಾಟಕ ಬೆಂಬಲ ಸೂಚಿಸುತ್ತದೆ ಎಂದು ಕಾರ್ಯದರ್ಶಿ ಕಾವ್ಯಾ ಅಚ್ಯುತ್ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಅಸಮಾನತೆ, ಸಂಸದ ಪ್ರಜ್ವಲ್ ರೇವಣ್ಣ ತನ್ನ ಬಲಾಡ್ಯ ಕುಟುಂಬದ ಕಾರಣಕ್ಕಾಗಿ ದೊರೆತಿರುವ ಜಾತಿ ಬಲ, ಹಣ ಮತ್ತು ಅಧಿಕಾರದ ದರ್ಪದಿಂದ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡು ಕ್ರಿಮಿನಲ್ ಸ್ವರೂಪದ ಲೈಂಗಿಕ ಹಿಂಸಾಚಾರಕ್ಕೆ ಗುರಿಪಡಿಸಿ ಮತ್ತು ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡದ್ದನ್ನು ಸಮುದಾಯ ಬೆಂಗಳೂರು ಹಾಗೂ ಸಮುದಾಯ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ನೂರಾರು ಮಹಿಳೆಯರು ಪ್ರಜ್ವಲ್ ರೇವಣ್ಣರ ಕುಟುಂಬದಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ. ರಾಜಕೀಯವಾಗಿ ಇಡಿ ದೇಶದಲ್ಲೆ ಪ್ರಭಾವಶಾಲಿಯಾಗಿರುವ ಈ ಕುಟುಂಬದ ವಿರುದ್ದ ಈಗ ನಡೆಯುತ್ತಿರುವ ತನಿಖೆ ಏನೇನೂ ಸಾಲದು. ಪ್ರಜ್ವಲ್ ರೇವಣ್ಣನ ಪಾಸ್ ಪೋರ್ಟ್, ವೀಸಾ ರದ್ದುಗೊಳಿಸಿ, ಆತ ಅಡಗಿಕೊಂಡಿರುವ ದೇಶದ ಕಾನೂನು ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಆತನನ್ನು ಬಂಧಿಸಿ ನಮ್ಮ ನೆಲದ ಕಾನೂನಿಗೆ ಒಪ್ಪಿಸಬೇಕು. ಈ ಕೆಲಸವನ್ನು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಇಚ್ಚಾಶಕ್ತಿಯಿಂದ ಮಾಡಬೇಕು ಎಂದು ಹೇಳಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಶಾಸಕ ಎಚ್.ಡಿ.ರೇವಣ್ಣರಿಂದ ಎಲ್ಲ ರೀತಿಯ ಲೈಂಗಿಕ ಶೋಷಣೆಗೆ ಒಳಗಾದ ಮತ್ತು ದೂರು ಸಲ್ಲಿಸಲು ಮುಂದೆ ಬಂದಿರುವ ಮಹಿಳೆಯರ ರಕ್ಷಣೆಗೆ ಸರಕಾರ ವಿಶೇಷ ಅಸಕ್ತಿ ವಹಿಸಬೇಕು. ದೂರುದಾರ ಮಹಿಳೆಯರ ಗೌಪ್ಯತೆ ಕಾಪಾಡಿ, ಅವರಿಗೆ ಆಪ್ತ ಸಮಾಲೋಚನೆ, ಕಾನೂನು ಸಲಹೆ, ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ಒದಗಿಸಬೇಕು. ನೊಂದ ಮಹಿಳೆಯರ ಫೊಟೊ, ವೀಡಿಯೋಗಳನ್ನು ಬಳಸದಂತೆ ಮಾಧ್ಯಮಗಳಿಗೆ ಸೂಚಿಸಬೇಕು. ತಪ್ಪಿದ್ದಲ್ಲಿ ಅಂತಹ ಮಾಧ್ಯಮ ಅಥವಾ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕಾವ್ಯಾ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News