ವಿಪಕ್ಷ ಸದಸ್ಯರ ಅಮಾನತು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2023-12-20 13:09 GMT

ಬೆಂಗಳೂರು: ಸಂಸತ್ತಿನ ವಿಪಕ್ಷ ಸದಸ್ಯರನ್ನು ಗುರಿಯಾಗಿಸಿಕೊಂಡು ಅಮಾನತು ಮಾಡುತ್ತಿರುವ ಕ್ರಮದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆ ಇದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಆವರಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ದೇಶದ ಪ್ರಜಾಪ್ರಭುತ್ವವನ್ನು ಪ್ರಧಾನಿ ಮೋದಿ ಆಡಳಿತ ದಿನನಿತ್ಯ ಕಗ್ಗೊಲೆ ಮಾಡುತ್ತಿದೆ. ದೇಶದ ಸಂಸತ್ ಭವನದೊಳಗೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಒಳ ನುಗ್ಗಿದ ಘಟನೆ ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದರೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಮನೋಹರ್, ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ಭದ್ರತಾ ವೈಫಲ್ಯವನ್ನು ಮರೆಮಾಚಲು ಅಮಾನತು ನಾಟಕ ಮಾಡುತ್ತಿದ್ದಾರೆ.ಲೋಕಸಭಾ ಸ್ಪೀಕರ್ ಅವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿ ಎಂದರು.

ವಿರೋಧ ಪಕ್ಷದ ಸಂಸದರು ನ್ಯಾಯ ಸಮ್ಮತವಾಗಿ ಹೋರಾಟ ನಡೆಸುತ್ತಿದ್ದಾರೆಂದು ದೇಶದ ಪ್ರತಿಯೊಬ್ಬ ಪ್ರಜೆಗೂ ಇಂದು ಮಾಹಿತಿ ದೊರಕುತ್ತಿದೆ.ಕೇಂದ್ರದ ವಿಫಲತೆಯನ್ನು ಜನ ಕಣ್ಣಾರೆ ಕಂಡಿದ್ದಾರೆ. ಜನರಿಗೆ ಹಾಗೂ ದೇಶಕ್ಕೆ ರಕ್ಷಣೆ ನೀಡಲು ವಿಫಲವಾಗಿರುವ ಬಿಜೆಪಿ ಸರಕಾರ ತೊಲಗದೆ ಹೋದರೆ ಮುಂದಿನ ದಿನಗಳಲ್ಲಿ ದೇಶದ ಜನತೆ ತೀರ್ವ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಜಿಜನಾರ್ಧನ್, ಎ.ಆನಂದ್, ಸುಧಾಕರ್ ರಾವ್, ಪ್ರಕಾಶ್, ಹೇಮರಾಜ್, ಬಾಲು,ಕೆ.ಟಿ.ನವೀನ್ ಪುಟ್ಟರಾಜು, ದರ್ಶನ್ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News