ಕಾರ್ಪೊ ರೇಟ್ ಸಂಸ್ಥೆಗಳು ಐಟಿಐಗಳನ್ನು ದತ್ತು ತೆಗೆದುಕೊಳ್ಳಲಿ : ಡಾ.ಶರಣಪ್ರಕಾಶ್ ಪಾಟೀಲ್ ಸಲಹೆ

Update: 2024-12-04 16:56 GMT

ಶರಣಪ್ರಕಾಶ್ ಪಾಟೀಲ್ 

ಬೆಂಗಳೂರು : ಯುವ ಸಮೂಹಕ್ಕೆ ಕೌಶಲ್ಯದ ತರಬೇತಿ ನೀಡಿ, ಸಬಲೀಕರಣ ಮಾಡಲು ಸರಕಾರ ಈಗಾಗಲೇ ಹಲವು ಯೋಜನೆ ಕೈಗೊಂಡಿದೆ. ಕಾರ್ಪೊರೇಟ್ ಸಂಸ್ಥೆಗಳು ಕೂಡ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಮತ್ತು ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಕೊಡಿಸಲು ಮುಂದಾಗಬೇಕು ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

ಬುಧವಾರ ನಗರದ ಇನ್‍ಫೆಂಟ್ರಿ ರಸ್ತೆಯಲ್ಲಿರುವ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತರಬೇತಿ ಹಾಗೂ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅವರು ಮಾತನಾಡಿದರು.

ರಾಜ್ಯದ ಹತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಆಧುನೀಕರಣಕ್ಕೆ ನಮ್ಮ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೆಲವು ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಐಟಿಐ ಸಂಸ್ಥೆಗಳ ಉನ್ನತೀಕರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಐಟಿಐಗಳಲ್ಲಿರುವ ಹಳೆಯ ಉಪಕರಣಗಳನ್ನು ಬದಲಾವಣೆ ಮಾಡಿ ಹೊಸ ಉಪಕರಣಗಳನ್ನು ಅಳವಡಿಸಲು ನಾವು ಮುಂದಾಗಿದ್ದೇವೆ. ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬೆಂಗಳೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

‘ಪ್ರಧಾನಮಂತ್ರಿ ಸೂರ್ಯ ಘರ್-ಮುಫ್ತ್ ಬಿಜ್ಲಿ’ ಯೋಜನೆಯಡಿಯಲ್ಲಿ ರಾಜ್ಯದ 252 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಐದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಸೌರ ಚಾವಣಿ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಒಂದು ವಾರದ ಅಲ್ಪಾವಧಿ ತರಬೇತಿಯನ್ನು ಪಡೆದಿದ್ದಾರೆ. ಇವರಿಗೆ ಈಗ ಹೆಚ್ಚಿನ ಉದ್ಯೋಗ ಅವಕಾಶ ದೊರೆಯಲಿದೆ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಇದೇ ಸಂದರ್ಭದಲ್ಲಿ 10 ತರಬೇತಿದಾರರಿಗೆ ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ಐಟಿಐಗಳ ಪ್ರಾಂಶುಪಾಲರಿಗೆ ವಿಶೇಷ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು. ಐಟಿಐಗಳಲ್ಲಿನ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಶರಣ ಪ್ರಕಾಶ್ ಪಾಟೀಲ್, ಅವುಗಳನ್ನು ಕೂಡಲೇ ನಿವಾರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಾಲ್ಕು ಐಟಿಐ ಸಂಸ್ಥೆಗಳಿಗೆ ಪ್ರಶಂಸಾ ಪತ್ರ: ಹೊಸದಿಲ್ಲಿಯಲ್ಲಿ ಡೈರೆಕ್ಟರೇಟ್ ಜನರಲ್ ಆಫ್ ಟ್ರೈನಿಂಗ್ ಪ್ರಕಾರ ಅತ್ಯುತ್ತಮ ಶ್ರೇಣಿ ಪಡೆದ ತುಮಕೂರು, ಮುಳಬಾಗಿಲು, ಮಾಲೂರು, ಪಾವಗಡ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಪ್ರಶಂಸಾ ಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರಾದ ಆರ್.ರಾಗಪ್ರಿಯ, ವಾಧ್ವಾನಿ ಫೌಂಡೇಶನ್‍ನ ಸುನಿಲ್ ದಹಿಯಾ, ಬಾಷೆ ಸಂಸ್ಥೆಯ ಸಕೀನಾ ಬಾಕರ್ ಮತ್ತು ಬಿ.ಜಗದೀಶ್, ಶೈನ್‍ಡರ್ ಎಲೆಕ್ಟ್ರಿಕ್ ಇಂಡಿಯಾ ಫೌಂಡೇಶನ್‍ನ ಅಭಿಮನ್ಯು ಸಾಹು, ಕ್ವೆಸ್ಟ್ ಅಲಯನ್ಸ್ ಸಂಸ್ಥೆಯ ಶ್ರೇಯಾ, ಸೇರಿದಂತೆ ಗಣ್ಯರು, ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News