ಅರಣ್ಯ ಒತ್ತುವರಿ ತಡೆಗೆ ಉಪಗ್ರಹ ಕಣ್ಗಾವಲು ವ್ಯವಸ್ಥೆ: ಈಶ್ವರ್ ಖಂಡ್ರೆ
ಬೆಂಗಳೂರು : ಹೊಸದಾಗಿ ಅರಣ್ಯ ಒತ್ತುವರಿ ತಡೆಯಲು ರೂಪಿಸಿರುವ ಉಪಗ್ರಹ ಕಣ್ಗಾವಲು ವ್ಯವಸ್ಥೆ ಸಮರ್ಪಕವಾಗಿ ಬಳಸಿಕೊಳ್ಳಿ. ಅರಣ್ಯ ಒತ್ತುವರಿಗೆ ಅವಕಾಶ ನೀಡದೆ, ಶೂನ್ಯ ಸಹಿಷ್ಣುತೆ ತಳೆಯುವಂತೆ ಹಾಗೂ ಒತ್ತುವರಿದಾರರು ಎಷ್ಟೇ ಪ್ರಭಾವಿಗಳಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಭೌಗೋಳಿಕ ಪ್ರದೇಶದ ಶೇ.33ರಷ್ಟು ಹಸಿರು ಹೊದಿಕೆ ಇರಬೇಕು. ಆದರೆ ರಾಜ್ಯದಲ್ಲಿ ಶೇ.22ರಷ್ಟು ಹಸಿರು ಹೊದಿಕೆ ಇದೆ. ಇರುವ ಅರಣ್ಯವನ್ನೂ ಒತ್ತುವರಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಈಗಾಗಲೇ ಅಕ್ಷಾಂಶ, ರೇಖಾಂಶ ಆಧಾರಿತ ಜಿಯೋ ರೆಫರೆನ್ಸ್ ಮೂಲಕ ಗುರುತಿಸಲಾಗಿರುವ ಅರಣ್ಯ ಗಡಿಯೊಳಗೆ ಯಾವುದೇ ಒತ್ತುವರಿ ಆಗದಂತೆ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದ ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ಅರಣ್ಯ ಬದಲಾವಣೆ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ಈಶ್ವರ್ ಖಂಡ್ರೆ ಕರೆ ನೀಡಿದ್ದಾರೆ.
ಸರಕಾರದ ನಡಾವಳಿಯಂತೆ 2015ರ ಪೂರ್ವದಲ್ಲಿ ಜೀವನೋಪಾಯಕ್ಕಾಗಿ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿರುವ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಬಾಕಿ ಇರುವ ಮತ್ತು ನ್ಯಾಯಾಲಯದ ತಡೆ ಇರುವ ಪ್ರಕರಣ ಹೊರತುಪಡಿಸಿ, 2015ರ ನಂತರ ಆಗಿರುವ ಎಲ್ಲ ಹೊಸ ಒತ್ತುವರಿಗಳಿಗೆ ಸಂಬಂಧಿಸಿದಂತೆ ಉಪಗ್ರಹ ಚಿತ್ರಗಳನ್ನು ತಾಂತ್ರಿಕ ಸಾಕ್ಷ್ಯವಾಗಿ ಉಲ್ಲೇಖಿಸಿ ತೆರವಿಗೆ ಕ್ರಮ ವಹಿಸುವಂತೆ ಅವರು ಸೂಚಿಸಿದ್ದಾರೆ.
ಏನಿದು ಅರಣ್ಯ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆ:
ಕಾಡ್ಗಿಚ್ಚು ಕಾಣಿಸಿಕೊಂಡಾಗ ಸಕಾಲದಲ್ಲಿ ಮಾಹಿತಿ ನೀಡುವ ದೂರಸಂವೇದಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮಾದರಿಯಲ್ಲೇ ಹೊಸ ಅರಣ್ಯ ಒತ್ತುವರಿ ಆದಾಗ ಅಥವಾ ಅರಣ್ಯ ಸ್ವರೂಪ ಬದಲಾದಾಗ ಸಂಬಂಧಿತ ವಲಯ ಅರಣ್ಯಾಧಿಕಾರಿಗೆ ಮಾಹಿತಿ ರವಾನಿಸುವ ವ್ಯವಸ್ಥೆಯನ್ನು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಸಹಯೋಗದಲ್ಲಿ ಅಭಿವೃದ್ಧಿ ಪಡಿಸುವಂತೆ ಕಳೆದ ಜೂನ್ ನಲ್ಲಿ ಈಶ್ವರ್ ಖಂಡ್ರೆ ಸೂಚಿಸಿದ್ದರು.
ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಚಿತ್ರ ಆಧಾರಿತವಾಗಿ ಸಕಾಲದಲ್ಲಿ ಅರಣ್ಯ ಸ್ವರೂಪ ಬದಲಾವಣೆಯ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಟಾನಕ್ಕೆ ತರಲಾಗಿದೆ. ಕಳೆದ ಜು.1ರಿಂದ ನ.3ರವರೆಗೆ 167 ಎಚ್ಚರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ ಮತ್ತು ಕ್ರಮ ವಹಿಸಲಾಗಿದೆ.
ಅರಣ್ಯ ಒತ್ತುವರಿಯಾದರೆ, ಅರಣ್ಯದ ಗಡಿಯೊಳಗೆ ಮರ ಕಡಿತಲೆಯಾದರೆ ಆ ಬಗ್ಗೆ ಇಲಾಖೆಗೆ ಸಂದೇಶ ಬರುತ್ತದೆ. ಅಧಿಕಾರಿಗಳು ಈ ಸಂದೇಶವನ್ನು ಸ್ಥಳೀಯ ಅಧಿಕಾರಿಗಳಿಗೆ ರವಾನಿಸುತ್ತಾರೆ. ಪ್ರಸ್ತುತ ಹಸಿರು ಹೊದಿಕೆಯಲ್ಲಿ 21 ದಿನಗಳಲ್ಲಾದ ಬದಲಾವಣೆಯನ್ನು ಈ ವ್ಯವಸ್ಥೆ ಮೂಲಕ ಗುರುತಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.