ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ: ಕುಮಾರಸ್ವಾಮಿ
ಬೆಂಗಳೂರು : ರಾಜ್ಯ ಸರಕಾರವೂ ಅಲಿಬಾಬಾ ಮತ್ತು ನಲವತ್ತು ಕಳ್ಳರ ಗುಂಪಿನಂತೆ ಇದ್ದು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣ ಸಿದ್ದರಾಮಯ್ಯ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲಿ ಏನೆಲ್ಲಾ ನಡೆದಿದೆ ಎಂಬುದು ಹಾದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಈ ಸರಕಾರ ಮತ್ತು ಸಚಿವರು ಆಲಿಬಾಬಾ 40 ಕಳ್ಳರ ರೀತಿ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಡಾ ಅಕ್ರಮದ ಬಗ್ಗೆ ಜಾರಿ ನಿರ್ದೇಶನಾಲಯ ಲೋಕಾಯುಕ್ತಗೆ ಪತ್ರ ಬರೆದಿದೆ, ಸರಿ. ಈಡಿ ಪತ್ರಕ್ಕೂ ಕೇಂದ್ರ ಸರಕಾರಕ್ಕೂ ಏನ್ ಸಂಬಂಧ? ಮುಡಾ ಹಗರಣದ ಬಗ್ಗೆ ಹೈಕೋರ್ಟ್‍ನಲ್ಲಿ ತನಿಖೆಗೆ ಆದೇಶ ಆಗಿದೆ. ಅದರ ಮೇಲೆ ತನಿಖೆ ನಡೆಯುತ್ತಿದೆ. ಆದರೆ, ಈಡಿಯವರಿಗೆ ಕೇಂದ್ರ ಸೂಚನೆ ಕೊಟ್ಟಿಲ್ಲ ಎಂದು ಅವರು ಹೇಳಿದರು.
ಜಾರಿ ನಿರ್ದೇಶನಾಲಯವನ್ನು ಸೀಳು ನಾಯಿ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಆದರೆ, ಅಧಿಕಾರಕ್ಕೆ ಬಂದಾಗಿನಿಂದ 17ರಿಂದ 18 ಸೀಟ್‍ಗಳನ್ನು ರಚನೆ ಮಾಡಿಕೊಂಡು ರಾಜಕೀಯ ಹಗೆತನ ತೋರುತ್ತಿರುವ ವ್ಯಕ್ತಿಗಳನ್ನು ಏನೆಂದು ಕರೆಯಬೇಕು? ಒಬ್ಬ ಸಚಿವರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಹಾಸನದ ಪ್ರಕರಣಕ್ಕೆ ಸಂಬಂಧಿಸಿ ವಕೀಲ ದೇವರಾಜೇಗೌಡ ಅವರು ಆಡಿಯೊ ಬಿಡುಗಡೆ ಮಾಡಿದ್ದರು. ಇದರಲ್ಲಿ ಡಿ.ಕೆ.ಶಿವಕುಮಾರ್ ಏನೇನು ಹೇಳಿದರು ಎನ್ನುವುದನ್ನು ಇಡೀ ದೇಶವೇ ಕೇಳಿಸಿಕೊಂಡಿದೆ. ಹಾಸನದಲ್ಲಿ ಅದೇನೋ ಸಮಾವೇಶ ಮಾಡುತ್ತಿದ್ದಾರಂತೆ, ಸಾಂತ್ವನ ಹೇಳುವುದಕ್ಕೆ ಹೋಗುತ್ತಾರಂತೆ. ಯಾರಿಗೆ ಸಾಂತ್ವನ ಹೇಳ್ತೀಯಪ್ಪ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.