ಟ್ರೋಲ್‍ಗೆ ಒಳಗಾದ ‘ಗೆಳತಿಯರೊಂದಿಗೆ ಹಾರೋಣ’ ಕಾರ್ಯಕ್ರಮ : ಮಧು ಬಂಗಾರಪ್ಪ ಸ್ಪಷ್ಟನೆ

Update: 2024-12-04 16:34 GMT

ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಸ್ವಾತಾಲಿಮ್ ಫೌಂಡೇಷನ್‍ನ ಸಹಯೋಗದಲ್ಲಿ ವಿಧಾನಸೌಧದಲ್ಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪರ ಕೊಠಡಿಯಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವೊಂದು ಅದರ ಹೆಸರಿನ ಅನುವಾದದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಒಳಗಾಗಿದೆ.

ಸ್ವಾತಾಲಿಮ್ ಫೌಂಡೇಷನ್ ಅವರ ಅಭಿಯಾನವಾದ ‘ಸಹೇಲಿ ಕಿ ಉಡಾನ್’ ಅಥವಾ ‘ಫ್ಲೈಯಿಂಗ್ ವಿತ್ ಫ್ರೆಂಡ್’ ಅನ್ನುವ ಕಾರ್ಯಕ್ರಮವನ್ನು ಅದೇ ರೀತಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದಾಗ ಅದು ‘ಗೆಳತಿಯರೊಂದಿಗೆ ಹಾರೋಣ’ ಎಂದು ಬದಲಾಗಿದೆ. ಇದರ ಅರ್ಥ ಸರಿಯಾಗಿಯೇ ಇದ್ದರೂ, ಅದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಕಾರಣವಾಗಿದೆ.

‘ಗೆಳತಿಯರೊಂದಿಗೆ ಹಾರೋಣ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಇದರ ಶೀರ್ಷಿಕೆ ಟ್ರೋಲ್ ಆಗುತ್ತಿರುವ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ನಾನು ಟ್ರೋಲರ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಮಕ್ಕಳಿಗೆ ಶೈಕ್ಷಣಿಕವಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಸ್ವಾತಾಲಿಮ್ ಫೌಂಡೇಷನ್ ಅವರ ಸಹಯೋಗದ ಈ ಕಾರ್ಯಕ್ರಮಗಳಿಗೆ ರಾಷ್ಟ್ರಮಟ್ಟದಲ್ಲಿ ಸಹೇಲಿ ಕಿ ಉಡಾನ್, ಫ್ಲೈಯಿಂಗ್ ವಿತ್ ಫ್ರೆಂಡ್ ಎಂಬ ಹೆಸರಿದೆ. ಅದನ್ನು ನಾವು ಕನ್ನಡಕ್ಕೆ ಅನುವಾದ ಮಾಡುವಾಗ, ಗೆಳತಿಯೊಂದಿಗೆ ಹಾರೋಣ, ಗೆಳತಿಯರೊಂದಿಗೆ ನಲಿಯೋಣ, ಗೆಳತಿಯೊಂದಿಗೆ ಆಡೋಣ ಹೀಗೆ ಹಲವಾರು ಹೆಸರುಗಳ ಬಗ್ಗೆ ಚರ್ಚೆಯಾಯಿತು. ಅಂತಿಮವಾಗಿ ಗೆಳತಿಯೊಂದಿಗೆ ಹಾರೋಣ ಎಂಬ ಹೆಸರಿಗೆ ಹೆಚ್ಚು ಒಲವು ವ್ಯಕ್ತವಾಯಿತು. ಹಾಗಾಗಿ ಈ ಹೆಸರನ್ನು ಅಂತಿಮಗೊಳಿಸಿದೆವು ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಸಚಿವ ಮಧು ಬಂಗಾರಪ್ಪ ಅವರು ನಡಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಬ್ಬ ‘ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ’ ಎಂದು ನೀಡಿದ್ದ ಹೇಳಿಕೆ ಟ್ರೋಲ್‍ಗೆ ಒಳಗಾಗಿತ್ತು. ಆ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಸೂಚಿಸಿದ ಸಚಿವರ ಮೇಲೂ ಟೀಕೆಗಳು ವ್ಯಕ್ತವಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News