ವಕೀಲರ ಸಂಘದ ಹೆಸರಿನಲ್ಲಿ ನಕಲಿ ಆಹ್ವಾನ ಪತ್ರಿಕೆ ಸೃಷ್ಟಿ: ಸುರೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ರಮೇಶ್ ಬಾಬು ಒತ್ತಾಯ

Update: 2024-02-02 13:11 GMT

ಬೆಂಗಳೂರು: ವಕೀಲರ ಸಂಘದ ಹೆಸರಿನಲ್ಲಿ ನಕಲಿ ಆಹ್ವಾನ ಪತ್ರಿಕೆಯನ್ನು ಸೃಷ್ಟಿಸಿರುವ ಮಾಜಿ ಸಚಿವ ಸುರೇಶ್ ಕುಮಾರ್ ವಿರುದ್ಧ ಸಂಘವು ಕಾನೂನು ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಶುಕ್ರವಾರ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಕೀಲರ ಸಂಘವು ಸುಪ್ರೀಂ ಕೋರ್ಟ್ ನ್ಯಾಯಧೀಶರಾಗಿ ಪದೋನ್ನತಿ ಪಡೆದ ನ್ಯಾಯಮೂರ್ತಿ ವರಾಳೆ ಮತ್ತು ಮುಖ್ಯ ನ್ಯಾಯಾಧೀಶ ದಿನೇಶ್ ಕುಮಾರ್ ಅವರಿಗೆ ಗೌರವ ಸಮಾರಂಭವನ್ನು ಹಮ್ಮಿಕೊಂಡಿದ್ದು, ಈವರೆಗೆ ಸಂಘವು ಕಾರ್ಯಕ್ರಮದ ಯಾವುದೇ ಆಹ್ವಾನ ಪತ್ರಿಕೆಯನ್ನು ಮುದ್ರಿಸಿಲ್ಲವೆಂದು ಸ್ಪಷ್ಟಪಡಿಸಿದೆ. ಆದರೂ, ಸುರೇಶ್‍ಕುಮಾರ್ ನಕಲಿ ಆಹ್ವಾನ ಪತ್ರಿಕೆಯನ್ನು ಸೃಷ್ಟಿಸಿ ಅದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರನ್ನು ಎಳೆದು ತಂದು ಪ್ರಚಾರ ಪಡೆಯುವ ಹುನ್ನಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಈ ಕಾರ್ಯಕ್ರಮಕ್ಕೆ ಸಮಯದ ಅಭಾವದಿಂದ ಮುಖ್ಯಮಂತ್ರಿಗಳಾಗಲಿ ಅಥವಾ ಉಪ ಮುಖ್ಯಮಂತ್ರಿಗಳಾಗಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಸಂಘವು ಅವರನ್ನು ಸಂಪರ್ಕಿಸಿರುವುದಿಲ್ಲ. ಆದರೆ, ಮಾಜಿ ಸಚಿವ ಸುರೇಶ್ ಕುಮಾರ್ ಅವರು ಉಪ ಮುಖ್ಯಮಂತ್ರಿಗಳಿಗೆ ಕಳಂಕ ತರುವ ಉದ್ದೇಶದಿಂದ ವಕೀಲರ ಸಂಘದ ಹೆಸರಿನಲ್ಲಿ ನಕಲಿ ಆಹ್ವಾನ ಪತ್ರಿಕೆಯನ್ನು ಸೃಷ್ಟಿ ಮಾಡಿದ್ದು, ವಕೀಲರ ಸಂಘವು ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದರು.

ಬೆಂಗಳೂರು ವಕೀಲರ ಸಂಘವು ಯಾವುದೇ ರಾಜಕೀಯ ಪಕ್ಷದ ಸಂಘಟನೆ ಅಲ್ಲ. ಆದ ಕಾರಣ ವಕೀಲರ ಸಂಘದ ಹೆಸರಿನಲ್ಲಿ ಅಪಪ್ರಚಾರ ಮಾಡಿರುವ ಮಾಜಿ ಕಾನೂನು ಸಚಿವ ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ‌ ಕ್ರಮ ಜರುಗಿಸಬೇಕು. ಮೌಲ್ಯಗಳ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಸುರೇಶ್ ಕುಮಾರ್, ಈ ಪ್ರಕರಣದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News