ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ಪ್ರಕರಣದ ತನಿಖೆ ನಡೆಸಲಾಗುವುದು: ಪೊಲೀಸ್ ಆಯುಕ್ತ ಬಿ.ದಯಾನಂದ್

Update: 2023-12-26 15:46 GMT

ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರು: ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ಹಾಗೂ ಮಾಜಿ ಪ್ರೇಯಸಿ ದಿಶಾ ನಡುವಿನ ಆರೋಪ, ಪ್ರತ್ಯಾರೋಪದ ನಡುವೆ ಮಾದಕ ಪದಾರ್ಥ ಸೇವನೆಯ ವಿಚಾರವೂ ಪ್ರಸ್ತಾಪವಾಗಿರುವುದನ್ನು ತನಿಖೆ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಮಂಗಳವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಇಬ್ಬರೂ ಪ್ರತ್ಯೇಕವಾಗಿ ಆರ್.ಟಿ.ನಗರ ಹಾಗೂ ಬಗಲುಗುಂಟೆ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆಗೆ ಈಗಾಗಲೇ ವಿಚಾರಣೆಗೆ ಹಾಜರಾಗಿ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸುವಂತೆ ಆರ್.ಟಿ.ನಗರ ಪೊಲೀಸರು ನೋಟೀಸ್ ನೀಡಿದ್ದಾರೆ. ಇವರಿಬ್ಬರ ಆರೋಪದ ನಡುವೆ ಕೆಲವು ವಿಡಿಯೋಗಳು ಬಹಿರಂಗವಾಗಿದ್ದು, ತನಿಖೆಯ ಭಾಗವಾಗಿ ಅವುಗಳ ಸತ್ಯಾಸತ್ಯತೆ ಮತ್ತು ಆ ವಿಡಿಯೋಗಳು ಬಹಿರಂಗವಾದ ಸಂದರ್ಭದ ಕುರಿತು ತನಿಖೆ ನಡೆಸಲಾಗುವುದು ಎಂದರು.

ಪ್ರಕರಣದ ಹಿನ್ನೆಲೆ: ಡಿ.25ರಂದು ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ಬಗಲಗುಂಟೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ‘ಈ ಹಿಂದೆ ನಾನು ಅವರೊಂದಿಗೆ ಸಂಬಂಧದಲ್ಲಿದ್ದು, ನಂತರ ಇಬ್ಬರೂ ದೂರವಾಗಿದ್ದೆವು. ಇದೀಗ ‘ನಿನ್ನ ಕ್ರಿಕೆಟ್ ಜೀವನ ಅಂತ್ಯಗೊಳಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ವಿರುದ್ಧ ಬರೆಯುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ' ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇವೆಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದರೂ ಡಿ. 22ರಂದು ಬಗಲಗುಂಟೆಯ ರಾಮಯ್ಯ ಲೇಔಟ್‍ನಲ್ಲಿರುವ ತಮ್ಮ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ, ಪೋಷಕರನ್ನು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಮಾಜಿ ಪ್ರೇಯಸಿ ದಿಶಾ  ಅವರು ಆರ್.ಟಿ.ನಗರ ಪೊಲೀಸ್ ಠಾಣೆಗೆ ನೀಡಿದ ತಮ್ಮ ಪ್ರತಿದೂರಿನಲ್ಲಿ, ‘ನಾನು ಮತ್ತು ಕಾರಿಯಪ್ಪ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದೆವು. ಇಬ್ಬರೂ ಒಂದೇ ಸಮುದಾಯದವರು. ಸಂಬಂಧದಲ್ಲಿದ್ದಾಗ ಇಬ್ಬರ ನಡುವೆ ಪರಸ್ಪರ ಸಮ್ಮತಿಯ ಮೇರೆಗೆ ದೈಹಿಕ ಸಂಪರ್ಕ ಬೆಳೆದು ನಾನು ಗರ್ಭ ಧರಿಸಿದ್ದೆ. ಅವರು ಬಲವಂತವಾಗಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದರು. ಅಲ್ಲದೇ ನನ್ನಿಂದ ಹಂತಹಂತವಾಗಿ 2 ಲಕ್ಷ ರೂ. ಹಣ ಪಡೆದುಕೊಂಡರು. ನಂತರದಲ್ಲಿ ಅವರ ಪೋಷಕರು, ‘ನೀನು ವಿಚ್ಛೇದಿತೆ. ನಮ್ಮ ಮಗನನ್ನು ಮದುವೆಯಾಗಬೇಡ’ ಎಂದು ಅವಾಚ್ಯವಾಗಿ ನಿಂದಿಸಿದರು. ಡಿ. 18ರಂದು ದಿಣ್ಣೂರು ಮುಖ್ಯರಸ್ತೆಯಲ್ಲಿರುವ ನಮ್ಮ ಮನೆಗೆ ಬಂದಿದ್ದ ಕಾರಿಯಪ್ಪ, ‘ನೀನು ಈಗಾಗಲೇ ಡಿವೋರ್ಸ್ ಆದವಳು. ನಿನ್ನನ್ನು ಕಂಡರೆ ನನಗಿಷ್ಟವಿಲ್ಲ. ನಿನ್ನಿಂದ ನಾನು ಯಾವುದೇ ಹಣ ಪಡೆದಿಲ್ಲ’ ಎಂದು ನನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News