ಕ್ಷುಲ್ಲಕ ಕಾರಣಕ್ಕೆ ದಲಿತ ಬಾಲಕನ ಬೆತ್ತಲೆಗೊಳಿಸಿ ಹಲ್ಲೆ, ಬೆದರಿಕೆ : ಕಾನೂನು ಕ್ರಮಕ್ಕೆ ದಲಿತ ಸಂಘಟನೆಗಳ ಒತ್ತಾಯ

Update: 2024-11-06 13:20 GMT

ಬೆಂಗಳೂರು : ಮೇಲ್ಜಾತಿಯ ಬಾಲಕಿಯ ಜತೆ ಮಾತನಾಡುತ್ತಿದ್ದ ಎನ್ನುವ ಕಾರಣಕ್ಕಾಗಿ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ಥಳಿಸಿದ್ದು, ಆತನ ತಾಯಿಗೆ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಆರೋಪಿಗಳಾದ ಸಂತೋಷ್ ಕುಮಾರ್ ಮತ್ತು ಲಕ್ಷ್ಮಿನಾರಾಯಣ (ಮೋನಿ) ಎಂಬುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿವೆ.

ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಪರಿವರ್ತನಾ ಜನಾಂದೋಲನ ಪ್ರಧಾನ ಕಾರ್ಯದರ್ಶಿ ವೈ.ಮರಿಸ್ವಾಮಿ ಮಾತನಾಡಿ, ‘ದಲಿತ ಸಮುದಾಯಕ್ಕೆ ಸೇರಿದ ಸಂತ್ರಸ್ತ ಬಾಲಕ ಮತ್ತು ಆತನ ತಾಯಿಗೆ ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿರುವ ಗುತ್ತಿಗೆದಾರ ಸಂತೋಷ್ ಕುಮಾರ್ ಮತ್ತು ಗಂಗೇನಹಳ್ಳಿ ವಾರ್ಡ್ ನಂ.34ರ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ (ಮೋನಿ) ಎಂಬುವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

‘ಆರೋಪಿ ಸಂತೋಷ್ ಕುಮಾರ್‌ನ ಸಹೋದರಿಯ ಮಗಳೊಂದಿಗೆ ಮಾತನಾಡುತ್ತಿದ್ದ ಎನ್ನುವ ಕಾರಣಕ್ಕಾಗಿ ಸಂತ್ರಸ್ತ ಬಾಲಕನನ್ನು ಆಗಸ್ಟ್ 15ರಂದು ಸಂತೋಷ್ ಕುಮಾರ್‌ನ ಮನೆಗೆ ಕರೆಸಿಕೊಂಡು ಆತನ ಮೊಬೈಲ್ ಕಿತ್ತುಕೊಂಡು ವಾಟ್ಸಾಪ್ ಚಾಟಿಂಗ್ ಎಲ್ಲವನ್ನೂ ಪರಿಶೀಲಿಸಿ, ‘ನನ್ನ ತಂಗಿ ಮಗಳೊಂದಿಗೆ ಮಾತನಾಡಬೇಡ, ಹಾಗೆಯೇ, ಆಗಸ್ಟ್ 18ರಂದು ನಡೆಯುವ ಗಣೇಶೋತ್ಸವದಲ್ಲಿ ಭಾಗವಹಿಸಬೇಡ, ಒಂದು ವೇಳೆ ನೀನು ಪಾಲ್ಗೊಂಡರೆ ನಿನ್ನನ್ನು ಸಾಯಿಸಿ ತಿಥಿ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ವೈ.ಮರಿಸ್ವಾಮಿ ದೂರಿದರು.

ಆ.21ರ ಬೆಳಗ್ಗೆ 8ಗಂಟೆಗೆ ಲಕ್ಷ್ಮಿನಾರಾಯಣ ಎಂಬಾತ ಬಾಲಕನಿಗೆ ಕರೆ ಮಾಡಿ ಸಿಬಿಐ ರಸ್ತೆಯಲ್ಲಿರುವ ಕಾಫಿ ಡೇ ಹತ್ತಿರ ಬರುವಂತೆ ಕರೆಸಿಕೊಂಡು ಅಲ್ಲಿಂದ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜ್ ಕ್ಯಾಂಪಸ್ಸಿನ ಮೈದಾನಕ್ಕೆ ಕರೆದುಕೊಂಡು ಹೋಗಿದ್ದ. ನಂತರ ಸಂತೋಷ್ ಕುಮಾರ್‌ಗೆ ಕರೆ ಮಾಡಿ ಕರೆಸಿಕೊಂಡು ಬಾಲಕನನ್ನು ಪಿಗ್ ಫಾರಂಗೆ ಎಳೆದೊಯ್ದು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಆತನನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡು, ಎದೆಯ ಮೇಲೆ ಕಾಲಿಟ್ಟು ಅವನ ಮರ್ಮಾಂಗಕ್ಕೆ ಥಳಿಸಿದ್ದಾರೆ. ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ಬೆತ್ತಲೆ ವಿಡಿಯೋವನ್ನು ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಬೆದರಿಕೆ ಹಾಕಿದ್ದಾರೆ ಎಂದು ವೈ.ಮರಿಸ್ವಾಮಿ ತಿಳಿಸಿದರು.

ಸಂತ್ರಸ್ತ ಬಾಲಕನ ತಾಯಿ ಮೀನಾ ಬಿ. ಮಾತನಾಡಿ, ‘ಸಂತೋಷ್ ಕುಮಾರ್ ಪ್ರಚೋದನೆಯಿಂದ ಲಕ್ಷ್ಮಿನಾರಾಯಣ ನನಗೆ ಕರೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿ, ನಿನ್ನ ಮಗ ಕಣ್ಣಿಗೆ ಕಾಣಿಸಬಾರದು. ಬೇಗ ಮನೆ ಖಾಲಿ ಮಾಡು, ಅವನು ಕಣ್ಣಿಗೆ ಕಾಣಿಸಿಕೊಂಡರೆ ನಿನ್ನ ಮೇಲೆ ಆಸಿಡ್ ಸುರಿಯುತ್ತೇನೆ, ಮನೆ ಖಾಲಿ ಮಾಡದಿದ್ದರೆ ಮನೆಗೆ ಬೆಂಕಿ ಹಾಕುತ್ತೇನೆಂದು ಬೆದರಿಸಿದ್ದಾನೆʼ ಎಂದು ಬೇಸರ ವ್ಯಕ್ತಪಡಿಸಿದರು.

ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ‘ಅಪ್ರಾಪ್ತ ಬಾಲಕ ಮತ್ತು ಆತನ ತಾಯಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವ ಸಂತೋಷ್ ಕುಮಾರ್ ಮತ್ತು ಲಕ್ಷ್ಮಿನಾರಾಯಣರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಂಡು ಕೂಡಲೆ ಅವರನ್ನು ಬಂಧಿಸಿ, ನೊಂದ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಸಂಚಾಲಕ ಗುರುಮೂರ್ತಿ, ದಲಿತ ಸಂರಕ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ. ಬಾಲಕೃಷ್ಣ, ಅಂಬೇಡ್ಕರ್ ಪೀಪಲ್ಸ್ ವಾಯ್ಸ್ ಪ್ರಧಾನ ಕಾರ್ಯದರ್ಶಿ ಜಿ.ಚಂದರ್‍ರಾವ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಆರ್.ಸಂಗೀತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ʼಗಂಗೇನಹಳ್ಳಿ ವಾರ್ಡ್ ನಂ.43ಕ್ಕೆ ಸೇರಿದ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ, ಸಂತ್ರಸ್ತರಿಗೆಗೆ ಇಡೀ ಸರಕಾರವೇ ನನ್ನ ಕೈಯಲ್ಲಿದೆ, ಬೈರತಿ ಸುರೇಶ್, ಸಿದ್ದರಾಮಯ್ಯ ಅವರೆಲ್ಲರೂ ನನಗೆ ಗೊತ್ತಿದ್ದಾರೆ, ನೀವೇನಾದರೂ ಪೊಲೀಸ್ ಠಾಣೆಗೆ ಹೋದರೆ ನಿಮ್ಮನ್ನು ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸಿಎಂ ಅವರೇ ನಿಮ್ಮ ಕಾಂಗ್ರೆಸ್ ಕಾರ್ಯಕರ್ತರು ದಲಿತರ ಮೇಲೆ ದೌರ್ಜನ್ಯ ಮಾಡಿ, ದಲಿತ ಬಾಲಕನ ಬೆತ್ತಲೆ ಮಾಡಿ ವಿಡಿಯೋ ಮಾಡುತ್ತಾರೆಂದರೆ ಇದೇನಾ ಕಾರ್ಯಕರ್ತರಿಗೆ ಹೇಳಿಕೊಟ್ಟಿರುವುದು. ಸಚಿವ ಭೈರತಿ ಸುರೇಶ್‍ರೆ ದಲಿತರಿಂದ ಮತ ಹಾಕಿಸಿಕೊಂಡು ದಲಿತರಿಗೆ ರಕ್ಷಣೆ ಕೊಡಬೇಕಾ? ಇಲ್ಲ ಅವರ ಮನೆಗೆ ನುಗ್ಗಿ ಹೊಡಿಬೇಕಾ? ಇದೇನಾ ನಿಮ್ಮ ಸಂಸ್ಕೃತಿ’

-ಪಿ.ಮೂರ್ತಿ ರಾಜ್ಯಾಧ್ಯಕ್ಷ ಅಂಬೇಡ್ಕರ್ ಸೇನೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News