ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗೆ ನೃತ್ಯ: ಅಧಿಕಾರಿಗಳನ್ನು ಅಮಾನತು ಮಾಡಲು ಒತ್ತಾಯ
ಬೆಂಗಳೂರು: ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ, ತಹಸಿಲ್ದಾರ್ ಸಿದ್ದೇಶ್, ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಇತರ ಅಧಿಕಾರಿಗಳು ಎಸ್‍ಸಿ, ಎಸ್‍ಟಿ ಮಹಿಳಾ ಹಾಸ್ಟೆಲ್‍ಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡಿ ಅಶಿಸ್ತು ಪ್ರದರ್ಶಿಸಿದ್ದು, ಅವರನ್ನು ತಕ್ಷಣ ಹುದ್ದೆಯಿಂದ ಅಮಾನತು ಮಾಡಿ ಇಲಾಖೆ ವಿಚಾರಣೆಗೆ ಒಳಪಡಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.
ಶನಿವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ದೀಪಾವಳಿ ಹಬ್ಬದ ಆಚರಣೆ ಮಾಡುತ್ತೇವೆ ಎಂದು ನೆಪ ಮಾಡಿಕೊಂಡು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡುತ್ತಾ ಅವರ ಮೈ, ಕೈಗಳನ್ನು ಮುಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ ಎಂದಿದ್ದಾರೆ.
ಇಂತಹ ಅಶಿಸ್ತಿನ ಮತ್ತು ಬಹಿರಂಗವಾಗಿ ಹೆಣ್ಣು ಮಕ್ಕಳೊಂದಿಗೆ ವರ್ತಿಸಿದ ರೀತಿ, ನೃತ್ಯ ಮಾಡುವ ರೀತಿ ಗಮನಿಸಿದರೆ ಇವರು ಜಿಲ್ಲಾಧಿಕಾರಿಗಳಾಗಿ ಮುಂದುವರಿಯಲು ಅರ್ಹತೆ ಕಳೆದುಕೊಂಡಿರುತ್ತಾರೆ. ಆದ್ದರಿಂದ ತಕ್ಷಣ ಜಿಲ್ಲಾಧಿಕಾರಿಯಾದ ಶ್ರೀನಿವಾಸ್ ಕೆ., ತಹಸಿಲ್ದಾರ್ ಸಿದ್ದಶ್, ಜಂಟಿ ನಿರ್ದೇಶಕ ಕೃಷ್ಣಪ್ಪ ರವರನ್ನು ಅಮಾನತ್ತಿನಲ್ಲಿಟ್ಟು ಇಲಾಖೆ ತನಿಖೆ ನಡೆಸಿ ಅವರ ಮೇಲೆ ಶಿಸ್ತು ಕ್ರಮಗಳನ್ನು ಜರುಗಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ವೇದಿಕೆಯ ಎಚ್.ಎಂ.ವೆಂಕಟೇಶ್ ಒತ್ತಾಯಿಸಿದ್ದಾರೆ.