ಪೋನ್‍ಗಳಲ್ಲಿ ಅಮೆರಿಕಾದ ಜಿಪಿಎಸ್ ಬದಲಾಗಿ ಭಾರತದ ನಾವಿಕ್ ಬಳಕೆಗೆ ಚಿಂತನೆ : ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್
ಬೆಂಗಳೂರು : ಜಗತ್ತಿನಾದ್ಯಂತ ಸ್ಮಾರ್ಟ್‍ಫೋನ್‍ಗಳಲ್ಲಿ ಅಮೆರಿಕಾ ಅಭಿವೃದ್ದಿಪಡಿಸಿದ ಜಿಪಿಎಸ್ ಅನ್ನು ಬಳಕೆ ಮಾಡಲಾಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಭಾರತ ಅಭಿವೃದ್ಧಿಪಡಿಸಿದ ನಾವಿಕ್ ಬಳಕೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸೆ(ಇಸ್ರೋ)ಅಧ್ಯಕ್ಷ ಡಾ.ಎಸ್. ಸೋಮನಾಥ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿರುವ ಡಾ.ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್)ವತಿಯಿಂದ ಆಯೋಜಿಸಿದ್ದ ‘ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರೊಡನೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಭಾರತ ಸರಕಾರ ಸ್ಮಾರ್ಟ್‍ಫೋನ್ ಉತ್ಪಾದನಾ ಸಂಸ್ಥೆಗಳಿಗೆ ಮುಂದಿನ ವರ್ಷದಿಂದ ಭಾರತದಲ್ಲಿ ಮಾರಾಟವಾಗುವ ಸ್ಮಾರ್ಟ್‍ಫೋನ್‍ಗಳಲ್ಲಿ ಭಾರತೀಯ ನಿರ್ಮಾಣದ ನ್ಯಾವಿಗೇಷನ್ ವ್ಯವಸ್ಥೆಯಾದ ನಾವಿಕ್‍ಗೆ ಅಗತ್ಯ ಬೆಂಬಲ ಒದಗಿಸುವಂತೆ ಸೂಚಿಸಿದೆ. ಇಸ್ರೋ ಅಭಿವೃದ್ಧಿ ಪಡಿಸಿರುವ ನಾವಿಕ್ ಒಂದು ಸ್ಟ್ಯಾಂಡ್ ಅಲೋನ್ ನ್ಯಾವಿಗೇಷನ್ ಸ್ಯಾಟ್‍ಲೈಟ್ ವ್ಯವಸ್ಥೆಯಾಗಿದೆ ಎಂದರು.
ಪ್ರಸ್ತುತ ನಾವಿಕ್‍ನ ಉಪಯೋಗಗಳು ಕೇವಲ ನಿಗದಿತವಾಗಿದೆ. ಇದನ್ನು ಈಗ ಸಾರ್ವಜನಿಕ ವಾಹನಗಳನ್ನು ಟ್ರ್ಯಾಕ್ ಮಾಡಲು, ನೈಸರ್ಗಿಕ ವಿಕೋಪಗಳನ್ನು ಟ್ರ್ಯಾಕ್ ಮಾಡಲು ಅಥವಾ ಅವುಗಳ ಕುರಿತಾದ ಮಾಹಿತಿ ಕಲೆ ಹಾಕಲು ಹಾಗೂ ಮೊಬೈಲ್ ಸಂಪರ್ಕ ಸಿಗದ ಆಳ ಸಮುದ್ರಗಳಿಗೆ ತೆರಳುವ ಮೀನುಗಾರರಿಗೆ ಎಚ್ಚರಿಕೆಯ ಸಂದೇಶದ ಮುನ್ಸೂಚನೆ ಕಳುಹಿಸಲು ಬಳಸಿಕೊಳ್ಳಲಾಗುತ್ತದೆ. ಸ್ಮಾರ್ಟ್‌ಫೋನ್ ಗಳಲ್ಲಿ ನಾವಿಕ್ ಬಳಕೆ ಮಾಡುವುದು ಮುಂದಿನ ಹೆಜ್ಜೆಯಾಗಿದೆ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟೆಲಿಸ್ಕೊಪ್ ಒದಗಿಸುವ ಯೋಜನೆ ಬಹಳ ವಿಶೇಷವಾಗಿದ್ದು, ಈ ಯೋಜನೆ ಭವಿಷ್ಯದ ವೈಜ್ಞಾನಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಲಿದೆ ಎಂದು ಸೋಮನಾಥ್ ಅಭಿಪ್ರಾಯಪಟ್ಟರು.
ಮಕ್ಕಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಯೋಜನೆ ಬಹಳ ವಿಶೇಷವಾಗಿದೆ. ಸಣ್ಣ ವಯಸ್ಸಿನಲ್ಲೇ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಬೆಳೆಸುವುದರಿಂದ ಮಕ್ಕಳಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಅರಿವು ಮೂಡಿಸಬಹುದಾಗಿದೆ. ಇಂತಹ ಯೋಜನೆಯನ್ನು ಯೋಜಿಸಿ ಅನುಷ್ಠಾನಗೊಳಿಸುತ್ತಿರುವ ಸರಕಾರದ ಕ್ರಮ ಅನುಕರಣೀಯ ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆಯನ್ನು ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ಮೊದಲ ಹಂತದಲ್ಲಿ 833 ವಸತಿ ಶಾಲೆಗಳಿಗೆ ಟೆಲಿಸ್ಕೊಪ್ ನೀಡುವ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ಎಲ್ಲ ಮಕ್ಕಳು ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಹಾಗೆಯೇ ಆ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೋತ್ಸಾಹ ನೀಡಬೇಕು ಎನ್ನುವ ಉದ್ದೇಶ ನಮ್ಮ ಸರಕಾರದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಎರಡು ವಸತಿ ಶಾಲೆಗಳಿಗೆ ಟೆಲಿಸ್ಕೊಪ್ ನೀಡಲಾಯಿತು.