ಬೆಂಗಳೂರಿನಲ್ಲಿ ವಾಹನ ನಿಲುಗಡೆ ನೀತಿ ಜಾರಿ

Update: 2024-02-29 14:16 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ವಾಹನಗಳ ಸುಗಮ ಸಂಚಾರ ಮತ್ತು ವಾಹನ ನಿಲುಗಡೆಗೆ ಆದ್ಯತೆಯನ್ನು ನೀಡುವ ಸಲುವಾಗಿ ನಗರದಲ್ಲಿ ವಾಹನ ನಿಲುಗಡೆ ನೀತಿ-2021 ಅನ್ನು ಜಾರಿಗೆ ತರಲಾಗುತ್ತಿದೆ. ಇದರ ಅನ್ವಯ ವಸತಿ ಪ್ರದೇಶ ಮತ್ತು ವಾಣಿಜ್ಯ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳಿಗೆ ಪರವಾನಗಿ ಶುಲ್ಕವಿಲ್ಲದಂತೆ ವಾಹನ ನಿಲುಗಡೆಗೆ ಅವಕಾಶ ನೀಡಲಾಗುವುದು. ಅಂತವರಿಗೆ ವಸತಿಯೇತರ ತೆರಿಗೆಯಿಂದಲೂ ವಿನಾಯಿತಿ ನೀಡಲಾಗುತ್ತದೆ.

ನಗರದ ಸಂಚಾರ ದಟ್ಟನೆಯನ್ನು ಸಮಗ್ರವಾಗಿ ಪರಿಶೀಲಿಸಿ, ಧೀರ್ಘಾವಧಿ ಪರಿಹಾರಗಳನ್ನು ಕಂಡುಕೊಳ್ಳಲು ‘ಬ್ರ್ಯಾಂಡ್ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು’ ಶೀರ್ಷಿಕೆಯಡಿಯಲ್ಲಿ ‘ಬೆಂಗಳೂರು ನಗರ ಸಮಗ್ರ ಸಂಚಾರ ಯೋಜನೆ’ ತಯಾರಿಕೆಗೆ ಯೋಜನೆ ರೂಪಿಸಲಾಗಿದೆ.

ಸಮಗ್ರ ಸಂಚಾರ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಈ ಸಾಲಿನಲ್ಲಿ 200 ಕೋಟಿ ರೂಪಾಯಿಗಳ ಸೀಡ್ ಮನಿ ಒದಗಿಸಲಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ಇರುವ 2 ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು.

ಬಿಬಿಎಂಪಿಗೆ ಸೇರಿದ ಆಟದ ಮೈದಾನದ ತಳ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ವಿನೂತನ ಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಮೈದಾನಕ್ಕೆ ಯಾವುದೇ ಧಕ್ಕೆಯಾಗದಂತೆ ಪಿ.ಪಿ.ಪಿ. ಆಧಾರದಲ್ಲಿ ಅನುಷ್ಠಾನ ಮಾಡಲು 5 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಪಾಲಿಕೆ ವ್ಯಾಪ್ತಿಯ 225 ವಾರ್ಡ್ ಗಳಲ್ಲಿ ನಿರ್ವಹಣೆಯ ಉದ್ದೇಶಕ್ಕಾಗಿ ಪ್ರತಿ ವಾರ್ಡ್ ಗೆ 75 ಲಕ್ಷ ರೂ. ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರತಿ ವಾರ್ಡ್ ಗೆ 1.25 ಕೋಟಿ ರೂ.ನಂತೆ ಒಟ್ಟಾರೆ 450 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಪರಿಷ್ಕೃತ ಮಹಾನಕ್ಷೆ- 2015ರಂತೆ ಮುಖ್ಯ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ ಒಟ್ಟಾರೆ 130 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಕನಕಪುರ ಮುಖ್ಯ ರಸ್ತೆಯಿಂದ ಬನ್ನೇರುಘಟ್ಟ ಮುಖ್ಯ ರಸ್ತೆ ಹಾಗೂ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಣ್ಣೂರುನಿಂದ ಬಾಗಲೂರು ರಸ್ತೆಗಳ ಅಗಲೀಕರಣ ಕಾಮಗಾರಿ ನಡೆಸಲಾಗುತ್ತದೆ. ಚಾಮರಾಜಪೇಟೆ ವ್ಯಾಪ್ತಿಯ ಪಾದರಾಯನಪುರದ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುವುದು.

ಬಳ್ಳಾರಿ ರಸ್ತೆ(ಸಾದಹಳ್ಳಿ ಗೇಟ್) ಬೇಗೂರು ಮಾರ್ಗವಾಗಿ ಹಾಗೂ ಸಾತನೂರು ಮೀಸಗಾನಹಳ್ಳಿ ಮುಖಾಂತರ ಅಂತ‌ರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ ನಿರ್ಮಿಸಲು ಟಿ.ಡಿ.ಆರ್ ಆಧಾರದಲ್ಲಿ ಜಮೀನು ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾಗುವುದು. ಕೇಂಗೇರಿ ಉಪನಗರವನ್ನು ಮೈಸೂರು ರಸ್ತೆಗೆ ನೇರವಾಗಿ ಸಂಪರ್ಕಿಸಲು ರೈಲ್ವೆ ಮೇಲು ಸೇತುವೆ ನಿರ್ಮಿಸಲು ಬಜೆಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಂಚಾರಯುಕ್ತ ರಸ್ತೆಗಳ ಯೋಜನೆಯಡಿಯಲ್ಲಿ ಬೆಂಗಳೂರು ನಗರದ ಹೊರವಲಯದಲ್ಲಿರುವ ರಾಜಕಾಲುವೆಗಳ ಬಫರ್ ಪ್ರದೇಶವನ್ನು ಲಘುವಾಹನ ಸಂಚಾರಕ್ಕೆ ರಸ್ತೆ ಪಥ, ಸೈಕಲ್ ಪಥ, ಜನ ಸ್ನೇಹಿ ನಡಿಗೆ ಮಾರ್ಗಗಳ ಅಭಿವೃದ್ಧಿ ಪಡಿಸಲು ಮುಂದಿನ ಮೂರು ವರ್ಷಗಳಲ್ಲಿ 600 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಪ್ರಸಕ್ತ ಬಜೆಟ್‍ನಲ್ಲಿ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ.

ಸುಗಮ ಸಂಚಾರಕ್ಕಾಗಿ ಗುಂಡಿ ರಹಿತ ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸಲು 300 ಕೋಟಿ ರೂ.ಗಳನ್ನು ಮತ್ತು ಸಂಯುಕ್ತ ಮೆಟ್ರೋ-ರಸ್ತೆಯಲ್ಲಿ ಡಬಲ್ ಡೆಕ್ಕರ್ ರಸ್ತೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಅದಕ್ಕೆ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

2024-25ನೆ ಸಾಲಿನ ಬಿಬಿಎಂಪಿ ಬಜೆಟ್‍ನಲ್ಲಿ 45 ಕಿ.ಮೀ. ಉದ್ದದ ಪಾದಚಾರಿ ಸ್ನೇಹಿ ನಡಿಗೆ ಪಥಗಳನ್ನು ಸ್ಥಾಪಿಸಲು 135 ಕೋಟಿ ರೂ.ಗಳನ್ನು ಒದಗಿಸಲಾಗುವುದು. ರಾಜ್ಯ ಸರಕಾರವು 2023-24ನೆ ಸಾಲಿನಲ್ಲಿ ನೈರುತ್ಯ ರೈಲ್ವೆ ಇಲಾಖೆ ಸಹಯೋಗದಲ್ಲಿ ಸ್ಥಾಪಿಸಿದ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು 380 ಕೋಟಿ ರೂ. ವೆಚ್ಚದಲ್ಲಿ ರೋಟರಿ ಮೇಲ್ಸೇತುವೆ ನಿರ್ಮಿಸಲಾಗುವುದು.

ರಸ್ತೆಗಳಲ್ಲಿ ನಿರ್ದಿಷ್ಟ ಓಎಫ್.ಸಿ ಕೇಬಲ್ ಡೆಕ್ಟ್ ಪಥ’ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಪ್ರಾರಂಭಿಕವಾಗಿ 2 ಕೋಟಿ ರೂ.ಗಳ ಅನುದಾನವನ್ನು ಕಲ್ಪಿಸಲಾಗಿದೆ. 50 ಕೋಟಿ ರೂ. ವೆಚ್ಚದಲ್ಲಿ ಬನಶಂಕರಿ ವೃತ್ತದಲ್ಲಿ ಬಿಎಂಟಿಸಿಯ ಟಿಟಿಎಂಸಿ ಮತ್ತು ಮೇಟ್ರೋ ನಿಲ್ದಾಣವನ್ನು ಜೋಡಣೆ ಮಾಡಲು ಚರ-ಮಟ್ಟಿಲು ಸಹಿತ ಮೇಲ್ಸೇತುವೆಯನ್ನು ನಿರ್ಮಿಸಲಾಗುವುದು.

ನಗರದಲ್ಲಿರುವ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ದುರಸ್ಥಿ ಮತ್ತು ನಿರ್ವಹಣೆಗೆ 25 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು. ಟ್ರಾಫಿಕ್ ಸಂಬಂಧಿತ ಕಾಮಗಾರಿಗಳನ್ನು ಒಳಗೊಂಡಂತೆ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 40 ಕೋಟಿ ರೂ.ಗಳ ಅನುದಾನವನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News