ಬೆಂಗಳೂರು ವಿಶೇಷ ಸ್ಥಾನ ಪಡೆದುಕೊಳ್ಳಲು ಎಫ್‍ಕೆಸಿಸಿಐ ಕೊಡುಗೆ ಅಪಾರ: ಸ್ಪೀಕರ್ ಯು.ಟಿ. ಖಾದರ್
ಬೆಂಗಳೂರು: ಯಾವುದೇ ನಗರ ತಾನೇ ತಾನಾಗಿ ಅಭಿವೃದ್ದಿ ಆಗಲು ಸಾಧ್ಯವಿಲ್ಲ, ಆರ್ಥಿಕ ಚಟುವಟಿಕೆಗಳು ನಡೆಯುವುದರಿಂದ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತಿದ್ದು, ಬೆಂಗಳೂರು ವಿಶ್ವದಲ್ಲೇ ವಿಶೇಷ ಸ್ಥಾನ ಪಡೆದುಕೊಳ್ಳಲು ಎಫ್‍ಕೆಸಿಸಿಐ(ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ)ಯ ಕೊಡುಗೆ ಅಪಾರ ಎಂದು ಸ್ವೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದಲ್ಲಿರುವ ಸರ್.ಎಂ.ವಿ. ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಎಪಿಎಂಸಿ ವರ್ತಕರು ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಫ್‍ಕೆಸಿಸಿಐ ಸಂಸ್ಥೆಯ ಸದಸ್ಯರು ರಾಜ್ಯದಲ್ಲಿ ಉತ್ತಮ ಆರ್ಥಿಕ ಚಟುವಟಿಕೆಗಳು ನಡೆಯುವ ವಾತಾವರಣ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕೆಲ ವರ್ಷಗಳ ಹಿಂದೆ ತೊಗರಿಬೇಳೆ ಬೆಲೆ ಏರಿಕೆಯ ಕೃತಕ ಸೃಷ್ಟಿ ಮಾಡಿದ್ದ ಸಂದರ್ಭದಲ್ಲಿ ಬೆಲೆ ನಿಯಂತ್ರಣಕ್ಕೆ ಎಫ್‍ಕೆಸಿಸಿಐ ನಿಂದ ದೊರೆತಿದ್ದ ಸಹಕಾರ ಸ್ಮರಣೀಯ ಎಂದರು.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲು ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ನಿಮ್ಮ ಪಾತ್ರ ಹಿರಿದಾಗಿದೆ. ಭವಿಷ್ಯದ ಜನಾಂಗವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಮುಂದಿನ ಸವಾಲುಗಳಿಗೆ ಸಜ್ಜು ಮಾಡುವ ಕಾರ್ಯದಲ್ಲಿ ನೀವೆಲ್ಲರೂ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಪಿಎಂ ಮಿತ್ರ ಟೆಕ್ಸ್‍ಟೈಲ್ ಪಾರ್ಕ್ ಯೋಜನೆಗೆ ಮೂಲಸೌಕರ್ಯ ನಿರ್ಮಿಸಲು ರಾಜ್ಯ ಸರಕಾರ 390 ಕೋಟಿ ರೂ. ಬಿಡುಗಡೆ ಮಾಡಲಿದೆ. ಈಗಾಗಲೇ ಪಾರ್ಕ್ ಯೋಜನೆಗೆ ಕಲಬುರಗಿಯಲ್ಲಿ ಒಂದು ಸಾವಿರ ಎಕರೆ ಭೂಮಿ ಹಂಚಿಕೆ ಮಾಡಿ ಖಾತೆ ಮಾಡಿಸಿಕೊಡಲಾಗಿದೆ ಎಂದರು.
ಮೂಲಸೌಕರ್ಯ ನಿರ್ಮಾಣಕ್ಕೆ ಈ ಮೊದಲು 50 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಚ್‍ಕೆಡಿಬಿ ಮತ್ತು ರಾಜ್ಯ ಸರಕಾರದಿಂದ 390 ಕೋಟಿ ಬಿಡುಗಡೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಏಳು ಪಿಎಂ ಮಿತ್ರ ಟೆಕ್ಸ್‍ಟೈಲ್ ಪಾರ್ಕ್ ಗಳಲ್ಲಿ ರಾಜ್ಯಕ್ಕೆ ಒಂದು ಯೋಜನೆ ಲಭಿಸಿದೆ. ಸ್ಪಿನ್ನಿಂಗ್‍ನಿಂದ ಡೈಯಿಂಗ್ ಹಂತದವರೆಗೆ ಎಲ್ಲ ಪ್ರಕ್ರಿಯೆಗಳು ಒಂದೇ ಸೂರಿನಡಿ ನಡೆಯಲಿವೆ. ಈ ಯೋಜನೆಯಿಂದ ಸುಮಾರು 1.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಅವರು ಮಾಹಿತಿ ನೀಡಿದರು.
ಎಪಿಎಂಸಿ ಡಿಜಿಟಲೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅನೇಕ ವಿಚಾರಗಳನ್ನು ಸರಿಪಡಿಸಬೇಕಿದೆ. ಯಾವುದೇ ಸಮಸ್ಯೆಗಳಿದ್ದರೆ ಎಫ್‍ಕೆಸಿಸಿಐ ಪದಾಧಿಕಾರಿಗಳು ನಮ್ಮ ಗಮನಕ್ಕೆ ತಂದರೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಫ್‍ಕೆಸಿಸಿಐನ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಬಾಲಕೃಷ್ಣ, ಉಮಾರೆಡ್ಡಿ, ಬಿ.ವಿ. ಗೋಪಾಲರೆಡ್ಡಿ, ಲೋಕರಾಜ್ ಉಪಸ್ಥಿತರಿದ್ದರು.
ಎಪಿಎಂಸಿ ಕಾಯ್ದೆ ಪುನರ್‍ಸ್ಥಾಪನೆಯಿಂದ ರೈತರಿಗೆ ವರ್ತಕರಿಗೆ ಅನುಕೂಲವಾಗಿದೆ. ವರ್ತಕರಿಗೆ ಶೋಷಣೆಯಾಗುವುದಿಲ್ಲ. ರೈಸ್ಮಿಲ್ ಮಾಲೀಕರು, ದಾಲ್ ಮಿಲ್ ಮಾಲೀಕರು, ಅಡಕೆ ವರ್ತಕರ ಅಭಿಪ್ರಾಯ ಸಂಗ್ರಹಣೆ ಮಾಡಿದ ನಂತರವೇ ಸರಕಾರ ಎಪಿಎಂಸಿ ಕಾಯ್ದೆ ಪುನರ್‍ಸ್ಥಾಪನೆ ಮಾಡಿದೆ. ರೈತರು, ವರ್ತಕರು ಮತ್ತು ಹಮಾಲರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.
-ಶಿವಾನಂದ ಪಾಟೀಲ್, ಕೃಷಿ ಮಾರುಕಟ್ಟೆ ಸಚಿವ