ಬೆಂಗಳೂರು : ಸೈಬರ್ ವಂಚನೆ ಪ್ರಕರಣಗಳ ಪತ್ತೆಗೆ ‘ವಿಶೇಷ ತನಿಖಾ ತಂಡ’ ರಚನೆ: ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು, ನ.17: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಪತ್ತೆಗಾಗಿ ಡಿಸಿಪಿ ದರ್ಜೆಯ ನಾಲ್ಕು ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಪ್ರತ್ಯೇಕ ‘ವಿಶೇಷ ತನಿಖಾ ತಂಡ’ಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿಸಿಪಿಗಳಿಗೆ ಹೊಸ ಜವಾಬ್ದಾರಿ ವಹಿಸಲಾಗಿದೆ ಎಂದರು.
ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂ(ಎಇಪಿಎಸ್) ಅಡಿ ಬಯೋಮೆಟ್ರಿಕ್ ಮೂಲಕ ಬ್ಯಾಂಕ್ ಖಾತೆಯಲ್ಲಿ ಹಣ ವಂಚನೆ ಮಾಡುತ್ತಿರುವ ವಂಚಕರ ವಿರುದ್ಧ ನಗರದಲ್ಲಿ 116 ಪ್ರಕರಣಗಳು ದಾಖಲಾಗಿವೆ. ಈ ರೀತಿಯ ಪ್ರಕರಣಗಳನ್ನು ನಿಯಂತ್ರಿಸಿ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯವನ್ನು ನಗರ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರಿಗೆ ನೀಡಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದರು.
ನಗರದಲ್ಲಿ ದಾಖಲಾಗಿರುವ ಕೊರಿಯರ್ ಅಥವಾ ಉಡುಗೊರೆ ಎಂಬ ಸುಳ್ಳು ವಂಚನೆ ಮೂಲಕ ಜನರಿಂದ ಹಣ ಪಡೆಯುತ್ತಿರುವ ಪ್ರಕರಣಗಳ ಪತ್ತೆಗಾಗಿ ಪೂರ್ವ ವಿಭಾಗದ ಡಿಸಿಪಿ ಕುಲ್ದೀಪ್ ಕುಮಾರ್ ಜೈನ್ ಅವರಿಗೆ ವಹಿಸಲಾಗಿದೆ. ಆನ್‍ಲೈನ್ ಉದ್ಯೋಗ ವಂಚನೆ ಪ್ರಕರಣಗಳ ಪತ್ತೆಗಾಗಿ ದಕ್ಷಿಣ ವಿಭಾಗದ ಡಿಸಿಪಿ ಶಿವರಾಜ್ ದೇವರಾಜ್ ಹಾಗೂ ಖಾಸಗಿ ವಿಡಿಯೋ ಅಥವಾ ಭಾವಚಿತ್ರವನ್ನಿಟ್ಟುಕೊಂಡು ಧಮ್ಕಿ ಹಾಕಿ ಹಣದ ಬೇಡಿಕೆ ಪ್ರಕರಣಗಳ ಪತ್ತೆಗಾಗಿ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರಿಗೆ ನೀಡಲಾಗಿದೆ ಎಂದು ಬಿ.ದಯಾನಂದ್ ಹೇಳಿದರು.
ನಗರದಲ್ಲಿ ದಾಖಲಾಗುತ್ತಿರುವ ಒಂದೇ ಮಾದರಿಯ ವಿವಿಧ ಸೈಬರ್ ಅಪರಾಧ ಪ್ರಕರಣಗಳ ಪತ್ತೆಗಾಗಿ ಪ್ರತ್ಯೇಕವಾಗಿ ಕ್ಷಿಪ್ರ ತನಿಖೆ ನಡೆಸಬೇಕು ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಡಿಸಿಪಿಗಳಿಗೆ ಸೂಚಿಸಿದರು.
ಈ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯಿಸಿ, ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂ ವಂಚನೆ ಪ್ರಕರಣಗಳ ಸಮಗ್ರ ತನಿಖೆ ನಡೆಸುವಂತೆ ಆಯುಕ್ತರು ಸೂಚಿಸಿದ್ದು, ನಗರದಲ್ಲಿ ಎಲ್ಲೆಲ್ಲಿ ಎಇಪಿಎಸ್ ವಂಚನೆ ಪ್ರಕರಣಗಳು ನಡೆದಿವೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಸಂಗ್ರಹಿಸಬೇಕಿದೆ. ಮೋಸ ಮಾಡಲು ವಂಚಕರು ಬಳಸಿಕೊಂಡ ವಿಧಾನದ ಕುರಿತ ಪ್ರಕರಣಗಳನ್ನು ಅಧ್ಯಯನ ನಡೆಸಲಾಗುವುದು ಎಂದರು.