ಗುಡ್ ಫ್ರೈಡೆ ಶುಭಾಶಯ ಕೋರಿದ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ

Update: 2024-03-27 15:39 GMT

ಬೆಂಗಳೂರು: ಶುಭ ಶುಕ್ರವಾರ(ಗುಡ್ ಫ್ರೈಡೆ) ಮತ್ತು ಈಸ್ಟರ್ ರವಿವಾರದ ಅಂಗವಾಗಿ ಸಮಸ್ತ ಕರ್ನಾಟಕ ರಾಜ್ಯದ ಜನತೆಗೆ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಅವರು ಈಸ್ಟರ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಬುಧವಾರ ಪ್ರಕಟನೆ ಹೊರಡಿಸಿರುವ ಅವರು, ಪವಿತ್ರ ಗುರುವಾರ, ಶುಭ ಶುಕ್ರವಾರ ಮತ್ತು ಈಸ್ಟರ್ ಕ್ರೈಸ್ತ ಸಮುದಾಯದಕ್ಕೆ ಅತ್ಯಂತ ಪವಿತ್ರ ಸಮಯವಾಗಿದೆ. ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ ಆರಂಭವಾಗುವ ತಪಸ್ಸು ಕಾಲ ಎಂಬುದು ನಲವತ್ತು ದಿನಗಳ ಪವಿತ್ರ ಸಮಯವಾಗಿದ್ದು, ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಕ್ರೈಸ್ತರು ಮಾಂಸ ಸೇವನೆಯನ್ನು ತೊರೆದು, ಕ್ಷಮೆ ಹಾಗೂ ಪ್ರಾಯಶ್ಚಿತ್ತದ ಮೂಲಕ ಭಕ್ತಿಪೂರ್ವಕವಾಗಿ ಆಧ್ಯಾತ್ಮಿಕ ಆಚರಣೆಯಲ್ಲಿ ತೊಡಗುತ್ತಾರೆ.

ಈ ನಲವತ್ತು ದಿನಗಳ ಉಪವಾಸ, ಪ್ರಾಯಶ್ಚಿತ್ತ ಹಾಗೂ ದಾನ-ಧರ್ಮವು ಯೇಸುಕ್ರಿಸ್ತರ ಪೂಜ್ಯಯಾತನೆ, ಮರಣ ಮತ್ತು ಪುನರುತ್ಥಾನಕ್ಕೆ ಕ್ರೈಸ್ತರು ಆಧ್ಯಾತ್ಮಿಕವಾಗಿ ತಮ್ಮನ್ನೇ ತಾವು ಸಿದ್ದಪಡಿಸಿಕೊಳ್ಳುವ ಸಮಯವಾಗಿದೆ. ತಪಸ್ಸು ಕಾಲದ ನಲವತ್ತು ದಿನಗಳ ಮುಗಿದ ನಂತರ ರವಿವಾರದಿಂದ ಆರಂಭವಾಗುವ ಪವಿತ್ರ ವಾರವು ಕ್ರೈಸ್ತರ ಪಾಲಿಗೆ ಅತ್ಯಂತ ಪವಿತ್ರ ಸಮಯವಾಗಿದೆ.

ಈ ವಾರದಲ್ಲಿ ಬರುವ ಗುರುವಾರವನ್ನು ಪವಿತ್ರ ಗುರುವಾರವೆಂದು ಯೇಸುಕ್ರಿಸ್ತರ ಕೊನೆಯ ಭೋಜನದ ಸಂಕೇತವಾಗಿ ಆಚರಿಸಲಾಗುತ್ತದೆ. ಯೇಸು ಕ್ರಿಸ್ತರು ಮರಣ ಹೊಂದಿದ ದಿನವಾದ ಶುಕ್ರವಾರವನ್ನು ಶುಭ ಶುಕ್ರವಾರವೆಂದು ಕ್ರೈಸ್ತರು ಆಚರಿಸುತ್ತಾರೆ.

ಕ್ರೈಸ್ತರು ಮನುಷ್ಯರ ಪಾಪಗಳಿಗಾಗಿ, ಅವರ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದಿನವು ಮಾನವ ಕುಲಕ್ಕೆ ಶುಭಸೂಚಕವಾದ ಕಾರಣ ಇದನ್ನು ಶುಭಶುಕ್ರವಾರ ಎಂದು ಕರೆಯವುದು ವಾಡಿಕೆಯಾಗಿದೆ. ಅದೇ ರೀತಿ, ಈಸ್ಟರ್ ರವಿವಾರವು ಯೇಸುಕ್ರಿಸ್ತರು ಮರಣದಿಂದ ಮೂರು ದಿನದ ನಂತರ ಪುನರುತ್ಥಾನರಾದುದರ ಸಂಕೇತವಾಗಿದ್ದು, ಕ್ರೈಸ್ತರಿಗೆ ಇದು ಅತ್ಯಂತ ದೊಡ್ಡ ಹಬ್ಬವಾಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News