ಸರಕಾರಿ ಮಹಿಳಾ ನೌಕರರ ಸಂಘ ರಾಜಕೀಯದಿಂದ ದೂರ ಇರಲಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2024-02-23 15:10 GMT

ಬೆಂಗಳೂರು : ಮಹಿಳೆ ಎಲ್ಲ ರಂಗದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ಪಕ್ಷಾತೀತವಾಗಿ ನಡೆಯಲಿ. ರಾಜಕೀಯ ಚಟುವಟಿಕೆಯಿಂದ ಸಂಪೂರ್ಣ ದೂರ ಇರಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಶುಕ್ರವಾರ ನಗರದ ಪುರಭವನದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ಅರ್ಥಪೂರ್ಣ ಸಂಘಟನೆಯಾಗಲಿ, ಜಿಲ್ಲಾ ಹಾಗೂ ತಾಲೂಕು ಮಟ್ಟಕ್ಕೂ ಸಂಘಟನೆ ವಿಸ್ತರಣೆಯಾಗಲಿ ಎಂದು ಹಾರೈಸಿದರು.

ಸಾಮಾಜಿಕ ಕಾಳಜಿ ಬದ್ಧತೆಯಿಂದ ಕೆಲಸ ಮಾಡಿ, ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಿ, ಧೈರ್ಯದಿಂದ ಮುಂದೆ ಹೋಗಿ. ಸಂಘದೊಂದಿಗೆ ನಾವಿದ್ದೇವೆ. ಹೋರಾಟಕ್ಕೆ ಮತ್ತೊಂದು ಹೆಸರೆ ಹೆಣ್ಣು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಸರಕಾರದ ಬಹುನಿರೀಕ್ಷಿತ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಲು ಸರಕಾರಿ ನೌಕರರ ಶ್ರಮ ಸಾಕಷ್ಟಿದೆ. ನೌಕರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ ಫಲವಾಗಿ ಇಂದು ಯೋಜನೆಗಳು ಯಶಸ್ವಿಯಾಗಿವೆ. ನಮ್ಮ ರಾಜ್ಯದಲ್ಲಿ ಶೇ.52ರಷ್ಟು ಸರಕಾರಿ ಮಹಿಳಾ ನೌಕರರು ಇದ್ದು, ಇದು ಇಡೀ ದೇಶಕ್ಕೆ ಮಾದರಿಯಾಗಿರುವ ವಿಚಾರ ಎಂದು ಅವರು ತಿಳಿಸಿದರು.

12ನೆ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ಉತ್ತಮ ಸ್ಥಾನ ನೀಡಿದ್ದರು. ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಬಸವ ತತ್ವದಡಿಯಲ್ಲಿಯೆ ರಾಜ್ಯ ಸರಕಾರ ಕಾರ್ಯ ನಿರ್ವಹಿಸುತ್ತಿದ್ದು, ಹೀಗಾಗಿ ಬಸವಣ್ಣನವರನ್ನು ಸರಕಾರ ‘ರಾಜ್ಯದ ಸಾಂಸ್ಕೃತಿಕ ನಾಯಕ’ ರಾಯಭಾರಿ ಎಂದು ಘೋಷಿಸಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಚಿವೆ ಮೋಟಮ್ಮ, ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ, ಗೌರವಾಧ್ಯಕ್ಷೆ ಗೀತಾಮಣಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು, ಮಹಿಳಾ ನೌಕರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News