ವಿದೇಶಕ್ಕೆ ನಿಮ್ಮ ಮಗ ಸಾಯಲಿ ಅಂತಲೇ ಕಳಿಸಿದ್ರಾ? : ಸಿಎಂ ವಿರುದ್ಧ ಎಚ್‌ಡಿಕೆ ಆಕ್ರೋಶ

Update: 2024-05-25 08:11 GMT

ಎಚ್‌.ಡಿ.ಕುಮಾರಸ್ವಾಮಿ/ ಸಿದ್ದರಾಮಯ್ಯ

ಬೆಂಗಳೂರು : ಪ್ರಜ್ವಲ್ ನನ್ನು ವಿದೇಶಕ್ಕೆ ದೇವೇಗೌಡರೇ ಕಳಿಸಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, "ವಿದೇಶಕ್ಕೆ ನಿಮ್ಮ ಮಗನನ್ನು ಸಾಯಲಿ ಅಂತಲೇ ಕಳಿಸಿದ್ರಾ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ತಮ್ಮ ನಿವಾಸದ ಬಳಿ ಸಿಎಂ ಹೇಳಿಕೆಯ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ʼಯಾರಿಗೇ ಆಗಲಿ ನೋವು ನೋವೇ. ನಿಮ್ಮ ಕುಟುಂಬದಲ್ಲಿ ಒಂದು ಘಟನೆ ನಡೆದಿದೆ. ಆಗ ನಿಮ್ಮ ಮಗನನ್ನು ನೀವೇ ಕಳಿಸಿದ್ರಾ?. ಅವರ ಸಾವಿಗೆ ನೀವು ಕಾರಣರೆ?ʼ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ʼರಾಜತಾಂತ್ರಿಕ ಪಾಸ್ ಪೋರ್ಟ್ ಬಗ್ಗೆ ಇವರೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ಇವರಿಗೆ ಕಾನೂನಿನ ತಿಳಿವಳಿಕೆಯೇ ಇಲ್ಲ. ಪ್ರಜ್ವಲ್ ನನ್ನು ವಾಪಸ್ ಕರೆದುಕೊಂಡು ಬರಲು ಪತ್ರ ಬರೆದಿದ್ದಾರೆ. ರಾಜತಾಂತ್ರಿಕ ಮಾಡಬೇಕು ಎಂದು ಕೇಳಿದ್ದಾರೆ. ತಕ್ಷಣಕ್ಕೆ ಅದು ಸಾಧ್ಯವಿಲ್ಲʼ ಎಂದು ಹೇಳಿದರು.

ಸಿದ್ದರಾಮಯ್ಯಗೆ ಗೊತ್ತಿಲ್ಲವೇ?:

"ಪಾಸ್ ಪೋರ್ಟ್ ರದ್ದು ಪ್ರಕ್ರಿಯೆ ಸಾಕಷ್ಟು ದಿನ ಆಗಬಹುದು ಎನ್ನುವ ಕಾರಣಕ್ಕೆ ತಕ್ಷಣ ವಾಪಸ್ ಬಂದು ತನಿಖೆಗೆ ಹಾಜರಾಗು ಎಂದು ಪ್ರಜ್ವಲ್ ಗೆ ಸಂದೇಶ ಕೊಟ್ಟಿದ್ದೇನೆ. ದೇವೇಗೌಡರು ಕೊನೆ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಮಾಧ್ಯಮ ಹೇಳಿಕೆ ಮೂಲಕ ದೇವೇಗೌಡರು ನೀಡಿದ ಎಚ್ಚರಿಕೆ ಬಗ್ಗೆ ಮುಖ್ಯಮಂತ್ರಿಗಳು ಹಗುರವಾಗಿ ಮಾತಮಾಡುತ್ತಿದ್ದಾರೆ. ಎಷ್ಟು ವರ್ಷ ಇವರು ದೇವೆಗೌಡರ ಜತೆ ಕೆಲಸ ಮಾಡಿದ್ದಾರೆ?. ಅವರು ಯಾವ ರೀತಿ ರಾಜಕಾರಣ ಮಾಡಿದ್ದಾರೆ ಎನ್ನುವುದು ಸಿದ್ದರಾಮಯ್ಯಗೆ ಗೊತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಲೆ ಹಿಡಿಯುವ ಕೆಲಸ ಮಾಡುತ್ತಿರುವುದು ಯಾರು?:

ಇಡೀ ಪ್ರಕರಣದಲ್ಲಿ ಇವರು ಯಾರದ್ದು ಪಾತ್ರ ಇಲ್ಲ ಎಂದರೆ ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಯಾಕೆ ಮಾತನಾಡಿದರು?. ಇನ್ನು ಏನಾದರೂ ಸಾಕ್ಷ್ಯ, ಮೆಟಿರಿಯಲ್ ಇದೆಯಾ?. ಎಂದು ಸಂಭಾಷಣೆಯಲ್ಲಿ ಯಾಕೆ ಕೇಳಿದರು?. ಬ್ರೋಕರ್ ಕೆಲಸ, ತಲೆ ಹಿಡಿಯುವ ಕೆಲಸ ಮಾಡುತ್ತಿರುವುದು ಅವರು. ನನ್ನ ಬಗ್ಗೆ ಪಕ್ಷದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಅವಹೇಳನ ಮಾಡುತ್ತೀರಾ?. ನೀವು ಯಾವ ನೈತಿಕತೆ ಇಟ್ಟುಕೊಂಡಿದ್ದೀರಾ? ಎಂದು ಡಿಸಿಎಂ ಡಿಕೆಶಿ ವಿರುದ್ಧ ಕಿಡಿಕಾರಿದರು.

ಚನ್ನಗಿರಿ ಪ್ರಕರಣ ; ಅಧಿಕಾರಿಗಳಿಗೆ ನಿಯಂತ್ರಣ ಇಲ್ಲ:

ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಯಾರೂ ಗೌರವ ಕೊಡುವ ವಾತವರಣವಿಲ್ಲ. ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಗೌರವವಿಲ್ಲ, ಯಾಕೆಂದರೆ ಸರಕಾರ ಆ ರೀತಿ ಇದೆ. ಪೊಲೀಸ್ ಅಧಿಕಾರಿಗಳನ್ನು ಆ ರೀತಿ ಬಳಕೆ ಮಾಡಿಕೊಂಡಿದ್ದಾರೆ. ಅದ್ದರಿಂದ ರಾಜ್ಯದಲ್ಲಿ ಕಾನೂನು ಸಂಪೂರ್ಣ ಕುಸಿತವಾಗಿದೆ. ಇದು ಸರಕಾರದ ಸ್ವಯಂಕೃತ ಅಪರಾಧ. ಈ ಸರಕಾರದ ಬಗ್ಗೆ ಅಧಿಕಾರಿಗಳಲ್ಲೂ ವಿಶ್ವಾಸವಿಲ್ಲ, ಜನತೆಯಲ್ಲೂ ವಿಶ್ವಾಸವಿಲ್ಲ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News