ವಾಹನ ಅಡ್ಡಗಟ್ಟಿ ಗಲಾಟೆ ಮಾಡಿದರೆ ರೌಡಿಶೀಟರ್ ತೆರೆದು ಸೂಕ್ತ ಕ್ರಮ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಚ್ಚರಿಕೆ
ಬೆಂಗಳೂರು: ರಸ್ತೆಯಲ್ಲಿ ಗಲಾಟೆ ಹಾಗೂ ವಾಹನ ಸವಾರರನ್ನು ಸುಲಿಗೆ ಮಾಡುವಂತಹ ಕಿಡಿಗೇಡಿಗಳ ವಿರುದ್ಧ ರೌಡಿಶೀಟರ್ ತೆರೆದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವಾಹನ ಅಡ್ಡಗಟ್ಟಿ ಗಲಾಟೆ ಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸಲಾಗಿದ್ದು, ಕಾರು, ಬೈಕ್ ಅಡ್ಡಗಟ್ಟಿ ಗಲಾಟೆ ಮಾಡಿದವರ ಅವರ ವಿರುದ್ಧ ರೌಡಿಶೀಟರ್ ತೆರೆದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚೆಗಷ್ಟೇ ನಗರದ ವೈಟ್‍ಫೀಲ್ಡ್ ನ ಸಿದ್ದಾಪುರದಲ್ಲಿ ಇಬ್ಬರು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಗಲಾಟೆ ಮಾಡಿದ್ದರು. ಬೈಕ್‍ನಲ್ಲಿ ಬಂದ ಇಬ್ಬರು ಕಾರನ್ನು ಹಿಂಬಾಲಿಸಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ವಿಡಿಯೋ ಆಧಾರದ ಮೇಲೆ ಬೆಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ. ಆದ್ದರಿಂದ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲು ರಾಜ್ಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದರು.