ವಿ.ಕೆ.ಉಬೇದುಲ್ಲಾ ಶಾಲೆಯಲ್ಲಿ ಹೆಣ್ಣು ಮಕ್ಕಳ ಪಿಯು ಕಾಲೇಜು ಉದ್ಘಾಟನೆ

Update: 2023-11-04 13:09 GMT

ಬೆಂಗಳೂರು, ನ.4: ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ದರ್ಗಾ ಕಾಂಪ್ಲೆಕ್ಸ್ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಾಜಿನಗರದಲ್ಲಿರುವ ವಿ.ಕೆ.ಉಬೇದುಲ್ಲಾ ಶಾಲ್ಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಪಿಯು ಕಾಲೇಜು ವಿಭಾಗವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ವಿ.ಕೆ.ಉಬೇದುಲ್ಲಾ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಲಿದ್ದೇವೆ. ಈ ಶಾಲೆಯು ಆಧುನಿಕವಾಗಿದೆ. ಇದೇ ರೀತಿ ರಾಜ್ಯದ ಸರಕಾರಿ ಶಾಲೆಗಳನ್ನು ಆಧುನೀಕರಣಗೊಳಿಸಲಿದ್ದೇವೆ ಎಂದರು.

ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಲು 13 ಸಾವಿರ ಶಿಕ್ಷಕರನ್ನು ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 20 ಸಾವಿರ ಶಿಕ್ಷಕರನ್ನು ಹಂತ ಹಂತವಾಗಿ ನೇಮಕ ಮಾಡಲಾಗುವುದು. ಈ ಮೂಲಕ ಸರಕಾರಿ ಶಾಲೆಗಳಲ್ಲಿ ಎಲ್ಲ ಮಕ್ಕಳು ಕಲಿಯುವಂತಹ ವಾತಾವರಣ ಸೃಷ್ಠಿಸುತ್ತೇವೆ ಎಂದರು.

 

ಶಾಲೆಯ ಹಿನ್ನೆಲೆ: ವಿ.ಕೆ.ಉಬೇದುಲ್ಲಾ ಶಾಲೆಯನ್ನು ಐಎಂಎ ಸಂಸ್ಥೆಯವರು ನವೀಕರಿಸಿ ಒಂದರಿಂದ 10ನೆ ತರಗತಿಯವರೆಗೆ ನಡೆಸುತ್ತಿದ್ದರು. ಆದರೆ, ಬಹುಕೋಟಿ ಹಗರಣದಲ್ಲಿ ಐಎಂಎ ಸಂಸ್ಥೆ ಸಿಲುಕಿದ್ದರಿಂದ ವಿ.ಕೆ.ಉಬೇದುಲ್ಲಾ ಶಾಲೆಯು ಮುಚ್ಚುವ ಹಂತಕ್ಕೆ ತಲುಪಿತ್ತು. ಅಲ್ಲದೆ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದರು.

ಈ ಸಂದರ್ಭದಲ್ಲಿ ಹಝ್ರತ್ ಹಮೀದ್ ಶಾ ದರ್ಗಾ ಕಾಂಪ್ಲೆಕ್ಸ್ ಅಧ್ಯಕ್ಷರಾಗಿದ್ದ ಜಿ.ಎ.ಬಾವ ಅವರ ಮುತುವರ್ಜಿಯಿಂದ, ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಸ್ಥಳೀಯ ಶಾಸಕ ರಿಝ್ವಾನ್ ಅರ್ಶದ್ ಸಹಕಾರದಿಂದ ಶಾಲೆಯು ಪುನರ್ ಆರಂಭಗೊಂಡು, ಇದೀಗ ಪಿಯು ಕಾಲೇಜು ವಿಭಾಗವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಶಿವಾಜಿ ನಗರದ ಸುತ್ತಮುತ್ತಲಿನ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು, ಸೌಲಭ್ಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಕ್ಫ್ ಬೋರ್ಡ್‍ನ ಅಧೀನ ಸಂಸ್ಥೆಯಾಗಿರುವ ಹಝ್ರದ್ ಹಮೀದ್ ಶಾ ದರ್ಗಾ ಟ್ರಸ್ಟ್ ಒಂದು ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿ, ಶಾಲೆಯಲ್ಲಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದೆ.

ಪಿಯುಸಿ ವಿಭಾಗ ಆರಂಭವಾಗಿರುವುದರಿಂದ ಈ ಭಾಗದಲ್ಲಿನ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಇದು ನೆರವಾಗಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಜಿ.ಎ.ಬಾವ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.










 


 


 


 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News