ಆಯುರ್ವೇದ ಅಂಶವುಳ್ಳ ಭಾರತೀಯ ಆಹಾರ ಪದ್ಧತಿ ಜಗತ್ತಿಗೆ ಮಾದರಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2024-12-07 17:38 GMT

ಬೆಂಗಳೂರು : ಭಾರತೀಯ ಕೃಷಿ ಉತ್ಪನ್ನ, ಆಹಾರೋತ್ಪನ್ನಗಳಲ್ಲಿ ಆಯುರ್ವೇದ ಗುಣವಿದ್ದು, ಮೆದುಳು, ಹೃದಯ ಮತ್ತು ದೇಹಾರೋಗ್ಯಕ್ಕೆ ಸದಾ ಚೈತನ್ಯ ತುಂಬುತ್ತದೆ. ಹೀಗಾಗಿ ಭಾರತದ ಆಹಾರ ಶೈಲಿ, ಪದ್ಧತಿಯನ್ನು ಈಗ ಪ್ರಪಂಚವೇ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಆಹಾರ ಮತ್ತು ನಾಗರಿಕ ಸರಬರಾಜು ಪ್ರಹ್ಲಾದ್ ಜೋಶಿ ಪ್ರತಿಪಾದಿಸಿದರು.

ಶನಿವಾರ ನಗರದ ಅರಮನೆ ಮೈದಾನದಲ್ಲಿ ಬಿಹಾರ ಸರಕಾರದಿಂದ ಆಯೋಜಿಸಿದ್ದ ‘ಮಖಾನ’ ಸಿದ್ಧ ಆಹಾರೋತ್ಪನ್ನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅತ್ಯಂತ ಕಡಿಮೆ ಕೊಬ್ಬಿನಂಶ, ಪೌಷ್ಟಿಕತೆ, ಕ್ಯಾಲ್ಸಿಯಂ ಹೀಗೆ ಆರೋಗ್ಯಯುಕ್ತ ಆಹಾರ ಪದಾರ್ಥಗಳಿಂದಾಗಿ ನಮ್ಮ ಯುವ ಸಮುದಾಯವೂ ಸದೃಢವಾಗಿದೆ. ಹೀಗಾಗಿ ಇಡೀ ಜಗತ್ತೇ ಇಂದು ಔದ್ಯೋಗಿಕವಾಗಿ ಭಾರತೀಯ ಯುವ ಸಮುದಾಯವನ್ನು ಸೆಳೆಯುತ್ತಿದೆ ಎಂದು ಹೇಳಿದರು.

ಭಾರತದ ಆಹಾರ ಪದ್ಧತಿ, ವ್ಯಾಯಾಮ ಪದ್ಧತಿ, ಯೋಗ ಪದ್ಧತಿ ಮತ್ತು ಭಾರತೀಯ ಕುಟುಂಬ ಪದ್ಧತಿ ಜಗತ್ತಿನಲ್ಲೇ ಮಾದರಿಯಾಗಿದೆ. ಜರ್ಮನ್ ನಂತಹ ರಾಷ್ಟ್ರಗಳೂ ಇಂದು ನಮ್ಮ ಆಹಾರ ಪದ್ಧತಿ ಸ್ವೀಕಾರಕ್ಕೆ ಸಿದ್ಧವಾಗಿವೆ. ಭಾರತೀಯ ಆಹಾರೋತ್ಪನ್ನಗಳಿಗೆ ಬಹು ಬೇಡಿಕೆ ಸಲ್ಲಿಸುತ್ತಿವೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಒಂದು ಕಾಲದಲ್ಲಿ ರಾಗಿ ಗಂಜಿ, ರಾಗಿ ಮುದ್ದೆ, ರಾಗಿ ರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿಯಂತಹ ಮನೆ ಅಡುಗೆಯೇ ನಮ್ಮ ಆರೋಗ್ಯ ಕಾಯುತ್ತಿತ್ತು. ಇಂಥ ಆರೋಗ್ಯಯುತ ಆಹಾರ ಪದ್ಧತಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಚಾಲ್ತಿಯಲ್ಲಿದೆ ಎಂದು ಅವರು ಹೇಳಿದರು.

ಮನೆ ಅಡುಗೆ ಸವಿಯಿರಿ: ಗೋಬಿ ಮಂಚೂರಿ, ಪಿಜ್ಜಾ-ಬರ್ಗರ್, ನೂಡಲ್ಸ್, ಚಿಪ್ಸ್ ಹಲವು ಬಗೆಯ ಫಾಸ್ಟ್ ಫಡ್ ಗಳು ಯುವ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಕುಂದಿಸಿ ಅನಾರೋಗ್ಯಕ್ಕೆ ತಳ್ಳುತ್ತಿದ್ದು, ಬಹು ಬೇಗ ಹೃದಯಾಘಾತಕ್ಕೆ ಒಳಗಾಗುವಂತೆ ಆಗಿದೆ ಎಂದು ವಿಷಾದಿಸಿದ ಅವರು, ಆಯುರ್ವೇದ ಅಂಶಯುಕ್ತ ಮನೆ ಅಡುಗೆ ಸವಿಯಲು ಕರೆ ನೀಡಿದರು.

ಆಹಾರೋತ್ಪನ್ನದಲ್ಲಿ ಬಿಹಾರ ಛಾಪು: ಬಿಹಾರದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ದನೆ ನಡೆಯುತ್ತಿದ್ದು, ಆಹಾರೋತ್ಪನ್ನ ವಲಯದಲ್ಲಿ ಛಾಪು ಮೂಡಿಸುತ್ತಿದೆ. ಬಿಹಾರದಲ್ಲಿ ಸಿದ್ಧಪಡಿಸಿದ ವಿವಿಧ ‘ಮಖಾನ’ ಆಹಾರೋತ್ಪನ್ನ ಆರೋಗ್ಯ ಸಮೃದ್ಧಿಯಿಂದ ಕೂಡಿವೆ. ಕಡಿಮೆ ಫ್ಯಾಟ್, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೌಷ್ಟಿಕತೆಯುಳ್ಳ ಉತ್ಪನ್ನವಾಗಿದೆ. ಒಂದೇ ಕಡೆ ಕುಳಿತು ಕೆಲಸ ಮಾಡುವಂಥವರಿಗೆ ಅತ್ಯಂತ ಆರೋಗಯುಕ್ತ ಆಹಾರವಾಗಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಬೆಂಗಳೂರಲ್ಲಿ ಜನಪ್ರಿಯವಾದರೆ ಜಗತ್ತಿನಲ್ಲೇ ಪ್ರಸಿದ್ಧಿ: ಯಾವುದೇ ಆಹಾರ ಉತ್ಪನ್ನಗಳಿರಲಿ ದೇಶ-ವಿದೇಶಿಗರನ್ನೂ ಒಳಗೊಂಡಿರುವ ನಮ್ಮ ಬೆಂಗಳೂರಿನಲ್ಲಿ ಜನಪ್ರಿಯವಾದರೆ ಇಡೀ ಜಗತ್ತಿನಲ್ಲೇ ಪ್ರಸಿದ್ಧಿ ಪಡೆಯುತ್ತದೆ. ಹಾಗಾಗಿ ಬಿಹಾರದ ‘ಮಖಾನ’ ಆಹಾರ ಪದಾರ್ಥಗಳನ್ನು ಮೊದಲು ಬೆಂಗಳೂರಲ್ಲಿ ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮಖಾನ ಮಹೋತ್ಸವದಲ್ಲಿ ಬಿಹಾರದ ಆರೋಗ್ಯ ಮತ್ತು ಕೃಷಿ ಸಚಿವ ಮಂಗಲ್ ಪಾಂಡೆ ಮತ್ತು ಕೃಷಿ, ತೋಟಗಾರಿಕೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News