ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಲು ಸೂಚನೆ

Update: 2024-06-21 14:01 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳು ಮಳೆಯಿಂದಾಗಿ ಯಾವುದೇ ಸಂದರ್ಭದಲ್ಲಿ ಬಿದ್ದು ಹೋಗುವ ಸಂಭವವಿರುತ್ತದೆ. ಹೀಗಾಗಿ ಶಿಥಿಲಾವಸ್ಥೆಯಲ್ಲಿರುವ ಅಥವಾ ಅಪಾಯಕಾರಿಯಾಗಿರುವ ಸನ್ನಿವೇಶಗಳ ತೀವ್ರತೆಯನ್ನು ಪರಿಗಣಿಸಿ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು, ತರಗತಿಯ ಕೊಠಡಿಗಳನ್ನು ಮತ್ತು ಶೌಚಾಲಯಗಳನ್ನು ಬಳಸದೇ, ಸಮೀಪದ ಸುಸ್ಥಿತಿಯಲ್ಲಿರುವ ಕಟ್ಟಡ, ಕೊಠಡಿಗಳನ್ನು ಹಾಗೂ ಶೌಚಾಲಯಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಕಟ್ಟಡಗಳ, ಕೊಠಡಿಗಳ, ಶೌಚಾಲಯಗಳ, ಕಾಂಪೌಂಡ್‍ಗಳ ಹಾಗೂ ಶಾಲಾ ಆವರಣದಲ್ಲಿನ ಮರಗಳ ಸಮೀಪದಲ್ಲಿ ಸುತ್ತಾಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆದೇಶಿಸಲಾಗಿದೆ.

ಕೆಲವೆಡೆ ತೀವ್ರ ಮಳೆಯಿಂದಾಗಿ ಪ್ರವಾಹ ಅಥವಾ ನೆರೆ ಬಂದು ವಿದ್ಯಾರ್ಥಿಗಳು ಶಾಲೆಗಳಿಗೆ ಬಂದು ಹೋಗಲು ತೊಂದರೆಯುಂಟಾಗುವ ಅಥವಾ ಕೆಲವು ಸಂದರ್ಭಗಳಲ್ಲಿ ಮಳೆಯಿಂದಾಗಿ ಶಾಲೆಗಳ ಕೊಠಡಿಗಳಲ್ಲಿ ಮತ್ತು ಆವರಣದೊಳಗೆ ನೀರು ಸಂಗ್ರಹವಾಗುವ ಸಂಭವವಿರುತ್ತದೆ.

ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆಗಳ(ಸ್ಥಳೀಯ ಸಂಸ್ಥೆಗಳ) ಸಹಕಾರದಿಂದ ಶಾಲಾ ಕಟ್ಟಡದಲ್ಲಿ ಅಥವಾ ಆವರಣದಲ್ಲಿ ಸಂಗ್ರಹವಾಗಿರುವ ನೀರನ್ನು ತೆರವುಗೊಳಿಸಬೇಕು. ಇಂತಹ ಸನ್ನಿವೇಶಗಳಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪೂರ್ವಾನುಮತಿ ಪಡೆದು ಶಾಲೆಗಳಿಗೆ ರಜೆಯನ್ನು ಘೋಷಿಸಬೇಕು. ಅಂತಹ ರಜಾ ದಿನಗಳಲ್ಲಿನ ಪಾಠ-ಪ್ರವಚನಗಳನ್ನು ಮುಂದಿನ ಸರಕಾರಿ ರಜಾ ದಿನಗಳಲ್ಲಿ ಸರಿದೂಗಿಸಬೇಕು ಎಂದು ಸೂಚಿಸಿದ್ದಾರೆ.

ಶಾಲಾ ಆವರಣದಲ್ಲಿ ತೆರೆದ ಸಂಪು/ಪಿಟ್/ಫೌಂಡೇಷನ್ ಪಿಟ್/ತೆರೆದ ಗುಂಡಿ/ಮ್ಯಾನ್ ಹೋಲ್ ಇತ್ಯಾದಿಗಳು ಇದ್ದಲ್ಲಿ ಅವುಗಳನ್ನು ಯಾವುದೇ ಕಾರಣಕ್ಕೂ ತೆರೆದಿಡದೇ ಸುರಕ್ಷಿತವಾಗಿರಿಸುವ/ಭದ್ರಗೊಳಿಸುವ ಕುರಿತು ಅಗತ್ಯ ಕ್ರಮವಹಿಸಬೇಕು. ವಿದ್ಯಾರ್ಥಿಗಳು ಅವುಗಳ ಬಳಿ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ವಿದ್ಯುಚ್ಛಕ್ತಿ ಸಂಪರ್ಕ ಪಡೆದಿರುವ ತಂತಿ/ಕೇಬಲ್‍ಗಳು ಯಾವುದೇ ಕಾರಣಕ್ಕೂ ನೆಲದ ಮೇಲೆ ಹಾದು ಹೋಗದಂತೆ ಹಾಗೂ ವಿದ್ಯಾರ್ಥಿಗಳಿಗೆ ಎಟುಕದಂತೆ ಕ್ರಮವಹಿಸುವುದು ಮತ್ತು ಸುರಕ್ಷಿತವಲ್ಲದ ವಿದ್ಯುತ್ ಸಂಪರ್ಕದಿಂದ ಸಂಭವಿಸಬಹುದಾದ ಅವಘಡಗಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.

ಶಾಲೆಗಳಲ್ಲಿ ಸಣ್ಣ ಮಟ್ಟದ ದುರಸ್ತಿಗಳಿದ್ದಲ್ಲಿ ಹಾಗೂ ಕಟ್ಟಡದಿಂದ(ಮೇಲ್ಪಾವಣಿ ಇತ್ಯಾದಿ) ನೀರು ಸೋರುವಿಕೆ ಕಂಡುಬಂದಲ್ಲಿ ಗ್ರಾಮಪಂಚಾಯ್ತಿ/ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ತುರ್ತಾಗಿ ದುರಸ್ತಿಯನ್ನು ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಆಯುಕ್ತರು ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News