ಒಳಮೀಸಲಾತಿ | ನ್ಯಾ.ನಾಗಮೋಹನ್ ದಾಸ್ ಸಮಿತಿ ‘ಮಧ್ಯಂತರ ವರದಿ’ ನೀಡಲು ಆಗ್ರಹ

Update: 2025-02-07 23:44 IST
ಒಳಮೀಸಲಾತಿ | ನ್ಯಾ.ನಾಗಮೋಹನ್ ದಾಸ್ ಸಮಿತಿ ‘ಮಧ್ಯಂತರ ವರದಿ’ ನೀಡಲು ಆಗ್ರಹ

ನ್ಯಾ.ನಾಗಮೋಹನ್ ದಾಸ್

  • whatsapp icon

ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ರಾಜ್ಯ ಸರಕಾರ ನ್ಯಾ.ನಾಗಮೋಹನ್ ದಾಸ್ ಸಮಿತಿಯನ್ನು ರಚಿಸಿ ಎರಡು ತಿಂಗಳಾಗಿರುವುದರಿಂದ, ಈ ಕೂಡಲೇ ಸಮಿತಿಯು ತುರ್ತಾಗಿ ಮಧ್ಯಂತರ ವರದಿಯನ್ನು ನೀಡಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಆಗ್ರಹಿಸಿದೆ.

ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್, ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ದಶಕಗಳ ಕಾಲ ಹೋರಾಟ ಮಾಡಿ ಕಾದಿರುವ ನಾವು, ಇದೀಗ ಇನ್ನೆರಡು ತಿಂಗಳು ಕಾಯುವುದು ತ್ರಾಸದಾಯಕವಲ್ಲ. ಒಳಮೀಸಲಾತಿ ಜಾರಿಯಾಗುವವರೆಗೆ ಎಲ್ಲ ಸರಕಾರಿ ನೇಮಕಾತಿಗಳನ್ನು ತಡೆ ಹಿಡಿದಿರುವುದು ಸ್ವಾಗತಾರ್ಹವೇ. ಆದರೆ, ಹೆಚ್ಚು ಕಾಲ ಹೀಗೆ ನೇಮಕಾತಿ ತಡೆಹಿಡಿಯುವುದರಿಂದ ಇತರರಿಗೂ ತೊಂದರೆ, ಅನ್ಯಾಯವಾಗುತ್ತದೆ ಎಂದರು.

ರಾಜ್ಯ ಸರಕಾರ ಯಾವುದೇ ಸಮುದಾಯಕ್ಕೂ ಅನ್ಯಾಯವಾಗದ ಹಾಗೆ ಒಳಮೀಸಲಾತಿ ವರ್ಗೀಕರಣ ಮಾಡಬೇಕು. ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ‘ಪ್ರಾಯೋಗಿಕ ದತ್ತಾಂಶ’ವನ್ನು ಮಾನದಂಡವನ್ನಾಗಿ ವಿಧಿಸಿರುವುದರಿಂದ ಮುಂದಿನ ಜನಗಣತಿಯವರೆಗೆ ಅವಶ್ಯಕವಿರುವ ಅಂಶಗಳಿಗೆಲ್ಲ ‘ಸ್ಯಾಂಪಲ್ ಸಮೀಕ್ಷೆ' ಕೈಗೊಳ್ಳಬೇಕು. ಇದಕ್ಕೆ ರಾಜ್ಯ ಸರಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಬಸವರಾಜ್ ಕೌತಾಳ್ ಹೇಳಿದರು.

ವಕೀಲ ವಿನಯ್ ಶ್ರೀನಿವಾಸ್ ಮಾತನಾಡಿ, ಉದ್ಯೋಗಗಳಲ್ಲಿ ಅತಿ ಕಡಿಮೆ ಆಯ್ಕೆ/ಅವಕಾಶಗಳಿದ್ದಾಗ, ಪರಿಶಿಷ್ಟ ಜಾತಿಯ ಯಾವ ಗುಂಪಿಗೆ ಮೊದಲ ಆದ್ಯತೆ ನೀಡಬೇಕೆಂಬ ಶ್ರೇಣೀಕರಣವನ್ನು ನಿಗದಿಗೊಳಿಸಬೇಕು. ಬಡ್ತಿ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಪರಿಗಣಿಸಬೇಕು. ರಾಜಕೀಯ ಮತಕ್ಷೇತ್ರ ಮೀಸಲಾತಿಯಲ್ಲಿ ಮತ್ತು ಗುತ್ತಿಗೆ ನೌಕರಿಗಳಲ್ಲಿಯೂ ಒಳಮೀಸಲಾತಿ ಕಡ್ಡಾಯಗೊಳಿಸಲು ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಒಳಮೀಸಲಾತಿ ಅನುಷ್ಠಾನದಲ್ಲಿನ ಕುಂದುಕೊರತೆಗಳು ಹಾಗೂ ಪ್ರಗತಿಯ ಮೇಲ್ವಿಚಾರಣೆ ಮಾಡಲು ರಾಜ್ಯ ಪರಿಶಿಷ್ಟ ಆಯೋಗದಡಿಯಲ್ಲಿ ಒಂದು ಸ್ವತಂತ್ರ ಸಮಿತಿಯನ್ನು ರಚಿಸಬೇಕು. ಇಂದಿರಾ ಸಹಾನಿ ತೀರ್ಪಿನನ್ವಯ ಮೀಸಲಾತಿಗೆ ವಿಧಿಸಿರುವ ಶೇ.50ರಷ್ಟು ಮೀಸಲಾತಿ ಮಿತಿಯನ್ನು ರದ್ದುಪಡಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯಾಗದಂತೆ ನಿಗದಿತ ಗಡುವಿನೊಳಗೆ ಆಯೋಗವು ವರದಿ ನೀಡಬೇಕು. ಸಾಮಾಜಿಕ ನ್ಯಾಯವನ್ನು ಒಳಮೀಸಲಾತಿಯಲ್ಲಿಯೂ ಎತ್ತಿಹಿಡಿಯಬೇಕು ಎಂದು ವಿನಯ್ ಶ್ರೀನಿವಾಸ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕನಕಪುರ ಶಿವಣ್ಣ, ಚಂದ್ರು ತರಹುಣಿಸೆ, ಮಂಜುನಾಥ್ ಮರಾಟ, ವೇಣುಗೋಪಾಲ್ ಮೌರ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News