ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನ ಭ್ರಷ್ಟಾಚಾರವನ್ನು ತನಿಖೆ ನಡೆಸಿ : ನೈಜ ಹೋರಾಟಗಾರರ ವೇದಿಕೆ ಆಗ್ರಹ

Update: 2024-02-25 12:33 GMT

Photo : elfafrica.org

ಬೆಂಗಳೂರು : ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ಅಕ್ರಮವಾಗಿ ಟೆಂಡರ್ ನಡೆಯುತ್ತಿದ್ದು, ಜ.12ರಂದು 25 ಪ್ಯಾಕೇಜ್‌ಗಳಿಗೆ ಹೊರಡಿಸಿರುವ ಟೆಂಡರ್ ಪ್ರಕಟಣೆಯಲ್ಲಿ ನಡೆದ ಭ್ರಷ್ಟಾಚಾರವನ್ನು ತನಿಖೆ ನಡೆಸುವಂತೆ ನೈಜ ಹೋರಾಟಗಾರರ ವೇದಿಕೆಯು ಪೋಲಿಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದೆ.

ಜ.12ರಂದು ಸರಿ ಸುಮಾರು 81 ವಿವಿಧ ಸ್ಥಳಗಳಲ್ಲಿ ಕಾಮಗಾರಿಗಳನ್ನು ನಡೆಸಲು 25 ಪ್ಯಾಕೇಜ್‌ಗಳಿಗೆ ಟೆಂಡರ್ ಅನ್ನು ಆಹ್ವಾನಿಸಲಾಗಿದೆ. ಇದರ ಒಟ್ಟಾರೆ ಮೊತ್ತವು ಸುಮಾರು 400 ಕೋಟಿ ರೂ.ಗಳಷ್ಟು ಆಗಿದ್ದು, ಈ ಟೆಂಡರ್ ಅನ್ನು ಕೆಪಿಟಿಟಿ ಕಾಯ್ದೆ ಪ್ರಕಾರ 30 ದಿನಗಳ ಕಾಲಾವಕಾಶ ಕೊಡದೆ ಕೇವಲ 15 ದಿನದೊಳಗೆ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಲು ತೀರ್ಮಾನಿಸಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದೆ.

ನಿಗಮದ ಕೆಲವು ಅಧಿಕಾರಿಗಳು ಬಹುಪಾಲು ಟೆಂಡರ್‌ಗಳನ್ನು ಮೊದಲೇ ನಿರ್ಧರಿಸಿದ ಕಾಂಟ್ರಾಕ್ಟರ್‌ಳೊಂದಿಗೆ ಕೈಜೋಡಿಸಿ, ಶಾಮಿಲಾಗಿ ಅಕ್ರಮವಾಗಿ ಟೆಂಡರ್ ಪ್ರಕ್ರಿಯೆಯನ್ನು ನಡೆಸಿದ್ದಾರೆ. ಬಿಡ್ ತೆರೆಯುವ ಮೊದಲೇ ಕಾಂಟ್ರಾಕ್ಟರ್ ಗಳನ್ನು ನಿರ್ಧರಿಸಿ ಪಟ್ಟಿ ಮಾಡಿರುವ ವಿಷಯಗಳು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ ಎಂದು ಆರೋಪಿಸಿದೆ.

ಟೆಂಡರ್ ಪ್ರಕ್ರಿಯೆಯನ್ನು ಪ್ರಕಟಿಸಿದ ದಿನಾಂಕದಿಂದ 30 ದಿನಗಳವರೆಗೆ ಕಾಲಾವಕಾಶ ನೀಡಬೇಕು. ಈ ವಿಷಯದಲ್ಲಿ ಟೆಂಡರ್ ಪ್ರಕಟಣೆಗೊಂಡರೂ ಪೋರ್ಟಲ್‌ನಲ್ಲಿ ಕಾಮಗಾರಿಯ ಬಗ್ಗೆ ವಿವರವಾದ ಪೂರ್ಣ ಪ್ರಮಾಣದ ಮಾಹಿತಿಯನ್ನು ತಡವಾಗಿ ಫೆ.7 ಮತ್ತು ಫೆ.8ರಂದು ಪ್ರಕಟಿಸಲಾಗಿದೆ. ಇದರಿಂದ ಸ್ಪಷ್ಟವಾಗಿ ಗೋಚರಿಸುವುದೇನೆಂದರೆ ಕೆಪಿಟಿಟಿ ಆಕ್ಟ್ ಉಲ್ಲಂಘನೆ ಆಗಿರುವುದು ತಿಳಿಯುತ್ತದೆ ಎಂದು ದೂರಿನಲ್ಲಿ ತಿಳಿಸಿದೆ.

ಈ ಟೆಂಡರ್ ಪ್ರಕ್ರಿಯೆ ಕಾಮಗಾರಿಯಲ್ಲಿ ಕಾಯ್ದೆ ಉಲ್ಲಂಘನೆ ಹಾಗೂ ಪಾರದರ್ಶಕತೆ ಇಲ್ಲದಿರುವುದು. ಬಿಡ್ ಓಪನ್ ಮಾಡುವ ಮೊದಲೇ ಕಾಂಟ್ರಾಕ್ಟ್ ಗಳ ಪಟ್ಟಿಯನ್ನು ತಯಾರಿಸಿರುವುದು ಸೇರಿ ಈ ಪ್ರಕರಣವನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ನೈಜ್ಯ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News