ಅಕ್ರಮ ತಡೆಯಲಾಗದ ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು : ಎಚ್‍ಡಿಕೆ

Update: 2024-04-26 12:55 GMT

ಬೆಂಗಳೂರು : ‘ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ ಕ್ಯೂಆರ್ ಕೋಡ್ ಗಿಫ್ಟ್ ಕೂಪನ್, ಹಣ ಹಂಚಿಕೆ ಮಾಡುವವರು ರಣಹೇಡಿಗಳು’ ಎಂದು ಡಿಕೆಶಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಶುಕ್ರವಾರ ರಾಮನಗರದ ಬಿಡದಿ ಸಮೀಪದ ಕೇತಿಗಾನಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಣಹೇಡಿ ನಾನಲ್ಲ, ರಣಹೇಡಿಗಳು ಅವರು, ಕುತಂತ್ರದ ರಾಜಕಾರಣಿಗಳು ಅವರು. ಯಾರು ರಣಹೇಡಿ ಎಂದು ಮುಂದೆ ಚರ್ಚೆ ಮಾಡೋಣ. ರಣಹೇಡಿ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದ್ದು. ನಾವು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇವೆ. ರಾತ್ರೋರಾತ್ರಿ ಹೋಗಿ ಕಳ್ಳಕಳ್ಳವಾಗಿ ಜನರಿಗೆ ಕ್ಯೂಆರ್ ಕೋಡ್ ಇರುವ ಗಿಫ್ಟ್ ಕೂಪನ್‍ಗಳನ್ನು ಹಂಚಿಕೆ ಮಾಡಿದ ವ್ಯಕ್ತಿ ರಣಹೇಡಿತನದ ಬಗ್ಗೆ ಮಾತನಾಡುತ್ತಿದ್ದಾರೆಂದು ಟೀಕಿಸಿದರು.

ದೂರು ಕೊಟ್ಟರೆ ಪ್ರಯೋಜವಿಲ್ಲ: ಗಿಫ್ಟ್ ಕೂಪನ್ ಬಗ್ಗೆ ಚುನಾವಣಾ ಆಯೋಗಕ್ಕೆ ಈಗ ದೂರು ಕೊಟ್ಟರೂ ಏನು ಪ್ರಯೋಜನ ಇಲ್ಲ. ಹಿಂದೆ ಹಲವು ಬಾರಿ ದೂರು ಕೊಟ್ಟರೂ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ದೂರು ಕೊಟ್ಟರೆ ಏನು ಉಪಯೋಗ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮುಕ್ತವಾಗಿ ಹಣ ಹಂಚುವ ವ್ಯವಸ್ಥೆಯನ್ನೆ ತನ್ನಿ: ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ಈ ರೀತಿ ಚುನಾವಣೆ ಮಾಡುವ ಬದಲು ನೇರವಾಗಿ, ಮುಕ್ತವಾಗಿ ಗಿಫ್ಟ್, ಹಣ ಹಂಚುವ ವ್ಯವಸ್ಥೆಯನ್ನೇ ತನ್ನಿ. ಅವರವರ ಶಕ್ತಿ ಅನುಸಾರ ಹಣ ಹಂಚಿ ವೋಟು ಪಡೆಯುವ ವ್ಯವಸ್ಥೆ ಜಾರಿಗೆ ತನ್ನಿ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಈ ರೀತಿಯ ವ್ಯವಸ್ಥೆ ಬಂದರೆ ಕಾಂಗ್ರೆಸ್‍ನವರಿಗೆ ಒಳ್ಳೆಯದು ಎಂದು ಅವರು ವ್ಯಂಗ್ಯವಾಡಿದರು.

 ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು

‘ಇದನ್ನು ಚುನಾವಣಾ ಅಂತ ಪರಿಗಣಿಸಲು ಸಾಧ್ಯವಾ? ಪ್ರಜಾಪ್ರಭುತ್ವದ ಹಬ್ಬ ಎಂದು ಇದನ್ನು ಕರೆಯಲು ಆಗುತ್ತದೆಯೇ? ದುಡ್ಡು ಇರುವವರಿಗೆ ಲೂಟಿ ಮಾಡುವವರಿಗೆ ಇದು ಹಬ್ಬವೇ ಹೊರತು ಜನಸಾಮಾನ್ಯರಿಗೆ ಅಲ್ಲ. ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು. ಚುನಾವಣಾ ಆಯೋಗ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳೋದು ಉತ್ತಮ ಎಂದು ಅವರು ವಾಗ್ದಾಳಿ ನಡೆಸಿದರು.

ಈ ರೀತಿ ಅಡ್ಡದಾರಿಯಲ್ಲಿ, ವಾಮಮಾರ್ಗದಲ್ಲಿ ಮತ ಪಡೆಯುವ ಮಹಾನುಭಾವರು ಜನರಿಗೆ ಬುದ್ದಿ ಹೇಳಿದ್ದೇ ಹೇಳಿದ್ದು. ಈ ಮಹಾನುಭಾವ ಇಲ್ಲಿ ಇದ್ದಾರಲ್ಲ, ದೇಶದ ಬಗ್ಗೆ ಚರ್ಚೆ ಮಾಡ್ತಾರಲ್ಲ ಈ ಇಬ್ಬರು ಮಹಾನುಭಾವರು.. ಇವರ ಬಗ್ಗೆ ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ದೇವರ ಲಾಡು: ಜೋತಿಷಿಯೊಬ್ಬರು ಹೇಳಿದಂತೆ ಇವರು ಕನಕಪುರದಲ್ಲಿ ಹಣ, ಗಿಫ್ಟ್ ಕೂಪನ್ ಹಂಚಿದ್ದಾರೆ. ಅವರು ಹೇಳಿದರು ಎಂದು 505 ರೂ.ಹಣ, ಮಲೆಮಹದೇಶ್ವರ ದೇವಾಲಯದ ಲಾಡು ಮತ್ತು ಈ ಗ್ಯಾರಂಟಿ ಕಾರ್ಡ್‍ಗಳನ್ನ ರಾತ್ರಿಯೆಲ್ಲಾ ಹಂಚಿದ್ದಾರೆ. ಕಾರ್ಡು ಹಂಚಿಕೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ನಮ್ಮ ಎರಡೂ ಪಕ್ಷಗಳ ಕಾರ್ಯಕರ್ತರು ತಡೆದಿದ್ದಾರೆ. ಜಿಲ್ಲಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯುತ್ತಿಲ್ಲ. ಸೋಲಿನ ಭೀತಿಯಿಂದ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News