ಬರಗಾಲದ ಪರಿಹಾರ ನೀಡದ ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್ ಚಾಟಿ ಬೀಸಬೇಕು : ಕೋಡಿಹಳ್ಳಿ ಚಂದ್ರಶೇಖರ್

Update: 2024-04-25 16:43 GMT

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಪರಿಹಾರಕ್ಕೆ ಕೇಂದ್ರ ಸರಕಾರ ಹಣ ನೀಡದೆ ನಿರ್ಲಕ್ಷಿಸಿರುವುದನ್ನು ಖಂಡಿಸಿ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸರಿಯಾದ ರೀತಿಯಲ್ಲಿ ಚಾಟಿ ಬೀಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಎರಡು ಜವಾಬ್ದಾರಿ ಮರೆತ ಮೂರ್ಖರು. ಚುನಾವಣೆ, ಅಧಿಕಾರದ ಮೇಲೆ ಇರುವ ಆಸೆ, ಜನರನ್ನು ರಕ್ಷಿಸುವ ಆಸೆ ಇವರಿಗೆ ಇಲ್ಲ. ಸರಕಾರಗಳು ರೈತರನ್ನು ಮರೆತಿದ್ದು ಮಾತ್ರವಲ್ಲದೇ, ರೈತರ ಮೇಲೆ ಕಿಂಚಿತ್ತು ಗೌರವವೂ ಉಳಿಸಿಕೊಂಡಿಲ್ಲ. ಕೇವಲ ಮತಕ್ಕಾಗಿ ಮಾತ್ರ ರೈತರನ್ನು ಬಳಸಿಕೊಳ್ಳುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ದೂರಿದರು.

ಕೇಂದ್ರ ಸರಕಾರಕ್ಕೆ ಕನಿಷ್ಠ ಜ್ಞಾನ, ಜವಾಬ್ದಾರಿ ಇರಬೇಕಾಗಿತ್ತು. ಬರಗಾಲದ ಸಂಕಟಕ್ಕೆ ಸಿಲುಕಿರುವ ಕರ್ನಾಟಕದಲ್ಲಿನ ರೈತರ ಪರಿಸ್ಥಿತಿ, ಸಾಮನ್ಯ ಜನರ ಪರಿಸ್ಥಿತಿ ಏನಾಗಿದೆ ಅನ್ನುವದರ ಕಡೆ ಗಮನ ಹರಿಸಬೇಕಿತ್ತು. ರಾಜ್ಯದಲ್ಲಿರುವ ಬರಗಾಲದ ಪರಿಸ್ಥಿತಿಯನ್ನು ಕೇಂದ್ರ ಸರಕಾರದ ಗಮನಕ್ಕೆ ತಂದರು, ಬರಗಾಲದ ಪರಿಹಾರವನ್ನು ನೀಡದೆ ನಿರ್ಲಕ್ಷಿಸಿದರು. ನಂತರ ರಾಜ್ಯ ಸರಕಾರ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿಯನ್ನು ಸಲ್ಲಿಸಿದೆ ಎಂದು ತಿಳಿಸಿದರು.

ಕಂಗಲಾಗಿರುವ ರೈತರ ನಡುವೆ ಕೇಂದ್ರದ ತಾತ್ಸಾರ ಮನೋಭಾವ ತೋರದೆ, ರಾಜ್ಯಕ್ಕೆ ಚೊಂಬು ತೊರಿಸೋದು ಬೇಡ, ರಾಜ್ಯ ಸರಕಾರ ರೈತರಿಗೆ ಚೊಂಬು ಕೊಡೋದು ಬೇಡ. ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸರಿಯಾದ ಎಚ್ಚರಿಕೆ ನೀಡಿ ತಪ್ಪು ಸರಿಪಡಿಸಿಕೊಂಡು, ರೈತರಿಗೆ ಅನ್ಯಾಯ ಆಗದ ರೀತಿ ಸೂಚನೆಯನ್ನು ನೀಡಬೇಕೆಂದು ಚಂದ್ರಶೇಖರ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸುರೇಶ್ ಹುಸ್ಕೂರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News