ವಾಡಿಕೆಗಿಂತ ಅಧಿಕ ಮಳೆ | ‘ಪ್ರವಾಹ’ ಸ್ಥಳದಲ್ಲೇ ಇದ್ದು ಕೆಲಸ ಮಾಡಲು ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಸೂಚನೆ

Update: 2024-07-19 15:10 GMT

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಮಲೆನಾಡು, ಕರಾವಳಿಯ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾರ್ಯ ನಿರ್ವಹಿಸಬೇಕು. ಆ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ವಿಶ್ವಾಸ ಮೂಡಿಸಬೇಕು ಎಂದು ಕಂದಾಯ ಸಚಿವ  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓಗಳು ಹಾಗೂ ನೀರಾವರಿ, ಇಂಧನ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಜನವರಿಯಲ್ಲೇ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ, ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳನ್ನು ಗುರುತಿಸಿ ಆ ಭಾಗದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸುವಂತೆ ಸೂಚನೆಯನ್ನೂ ನೀಡಲಾಗಿತ್ತು. ಆದರೂ, ಕೆಲವು ಭಾಗಗಳಲ್ಲಿ ಪ್ರವಾಹದಿಂದ ಜನ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಧಿಕಾರಿಗಳು ಫೀಲ್ಡಿಗೆ ಇಳಿದು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಇಲ್ಲದಿದ್ದರೆ ಜನ ಮತ್ತಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಹೀಗಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ವಿರಾಮ ನೀಡುತ್ತಿದ್ದಂತೆ ಎಲ್ಲೆಲ್ಲಿ ರಸ್ತೆ ಕಿತ್ತುಹೋಗಿದೆ ಎಂದು ವರದಿ ತರಿಸಿಕೊಳ್ಳಬೇಕು. ಮುಂದಿನ ಸೋಮವಾರದಿಂದಲೇ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಜಿಲ್ಲಾ ಪಂಚಾಯತ್ ಸಿಇಓಗಳು ಮುಂದೆ ನಿಂತು ಈ ಕೆಲಸಗಳನ್ನು ಜವಾಬ್ದಾರಿಯಿಂದ ಪೂರೈಸಬೇಕು. ಅಲ್ಲದೆ, ವಿದ್ಯುತ್ ಕಡಿತವಾದರೆ ಕೂಡಲೇ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.

ಮಳೆಯ ಕಾರಣಕ್ಕೆ ಮನೆ ಕುಸಿದುಹೋದರೆ ಕೂಡಲೇ ಪರಿಹಾರ ಒದಗಿಸಬೇಕು. ಕುಸಿಯಬಹುದಾದ ಮನೆಗಳನ್ನು ಗುರುತಿಸಿ ಅಲ್ಲಿನ ನಿವಾಸಿಗಳನ್ನು ಕೂಡಲೇ ಹಾರೈಕೆ ಕೇಂದ್ರಗಳಿಗೆ ರವಾನಿಸಬೇಕು. ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಇಲಾಖೆ, ನಿರಾವರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ ಫೋರ್ಸ್ ರಚಿಸಿ ಪ್ರವಾಹ ಸಾಧ್ಯತೆ ಇರುವ ಗ್ರಾಮಗಳಿಗೆ ತಕ್ಷಣ ಕಳುಹಿಸಬೇಕು. ಟಾಸ್ಕ್‌ ಫೋರ್ಸ್ ಮೇಲ್ವಿಚಾರಣೆಗಾಗಿ ತಾಲೂಕು ಮಟ್ಟದ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಇದಲ್ಲದೆ, ಟಾಸ್ಕ್‌ ಫೋರ್ಸ್ ಕೆಲಸಗಳಿಗೂ ಒಂದು ಬಜೆಟ್ ಅಗತ್ಯವಿದ್ದು, ಅಗತ್ಯ ಹಣಕಾಸು ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳೇ ಮಾಡಿಕೊಡಬೇಕು. ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲೂ ಸಾಕಷ್ಟು ಎಸ್‍ಡಿಆರ್‌ ಎಫ್ ಹಣ ಇದ್ದು, ಈ ಹಣವನ್ನು ಟಾಸ್ಕ್‌ ಫೋರ್ಸ್ ಹಾಗೂ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಅಗತ್ಯವಿದ್ದರೆ, ಇನ್ನೂ ಹೆಚ್ಚುವರಿ ಹಣವನ್ನು ನೀಡಲು ಸರಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ನದಿಪಾತ್ರದ ಬಗ್ಗೆ ಎಚ್ಚರ ಇರಲಿ: ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಭಾಗಗಳಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ತಾಕೀತು ಮಾಡಿದರು.

ಕೆಆರ್‌ಎಸ್ ಸಂಪೂರ್ಣವಾಗಿ ತುಂಬಲಿದ್ದು, ಕನಿಷ್ಟ 1 ಲಕ್ಷ ಕ್ಯೂಸೆಕ್ ನೀರು ಹೊರ ಬಿಡುವ ಸಾಧ್ಯತೆ ಇದೆ. ಶಿವಮೊಗ್ಗದ ಗಾಜನೂರು ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದ್ದು, 70,000ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕೂ ನದಿಗಳೂ ಅಪಾಯ ಮಟ್ಟದಲ್ಲಿವೆ. ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದರು.

ನದಿ ನೀರು ಗ್ರಾಮಗಳಿಗೆ ನುಗ್ಗಬಹುದಾದ ಪ್ರದೇಶಗಳನ್ನು ಕೂಡಲೇ ಗುರುತಿಸಿ, ಡಂಗೂರ ಸಾಗಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಅಪಾಯ ಹೆಚ್ಚಾಗುವ ಸಾಧ್ಯತೆ ಇದ್ದರೆ ಎಲ್ಲರನ್ನೂ ಬೇರೆಡೆಗೆ ಸ್ಥಳಾಂತರಿಸಬೇಕು. ಅಗತ್ಯವಿದ್ದರೆ ಮತ್ತಷ್ಟು ಆರೈಕೆ ಕೇಂದ್ರವನ್ನು ತೆರೆಯಿರಿ, ಈ ಕೆಲಸಗಳಿಗೆ ಎಸ್‍ಡಿಆರ್‌ ಎಫ್ ಹಣವನ್ನು ಬಳಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News