ಪ್ರಧಾನಿ ಮೋದಿ ಕ್ರೈಸ್ತ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಲಿ: ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ

Update: 2023-12-28 13:56 GMT

ಬೆಂಗಳೂರು: ತಮ್ಮ ನಿವಾಸದಲ್ಲಿ ಕ್ರಿಸ್ಮಸ್ ಆಚರಿಸುವ ಸನ್ನಡತೆಯನ್ನು ತೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ರೈಸ್ತ ಸಮುದಾಯದ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಒತ್ತಾಯಿಸಿದ್ದಾರೆ.

ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, 2023ರ ಕ್ರಿಸ್ಮಸ್ ಹಬ್ಬವು ಭಾರತದ ಕ್ರೈಸ್ತರಿಗೆ ವಿಶೇಷವಾಗಿತ್ತು. ಅದಕ್ಕೆ ಕಾರಣ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ರಿಸ್ಮಸ್ ದಿನದಂದು ದಿಲ್ಲಿಯ ಕ್ರೈಸ್ತ ಸಮುದಾಯದ ಪ್ರತಿನಿಧಿಗಳನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದು, ಕ್ರೈಸ್ತ ಬಾಂಧವರಿಗೆ ಶುಭ ಕೋರಿದ್ದಾರೆ.

ಸ್ವತಃ ಪ್ರಧಾನಮಂತ್ರಿಗಳೇ ಕ್ರೈಸ್ತ ಸಮುದಾಯದ ಕುರಿತು ಅತ್ಯಂತ ಸಕಾರಾತ್ಮಕವಾಗಿ, ಸದಾಭಿಪ್ರಾಯದ ಮಾತುಗಳನ್ನು ಆಡಿದ್ದಾರೆ. ಅವರು ಕ್ರೈಸ್ತ ಸಮುದಾಯವು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಹಾಗೂ ಪ್ರಸ್ತುತ ದಿನಗಳಲ್ಲಿ ದಶಕಗಳಿಂದ ಕ್ರೈಸ್ತ ಸಂಸ್ಥೆಗಳು ಮಾಡುತ್ತಿರುವ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವೆಗಳನ್ನು ಸ್ಮರಿಸಿದ್ದಾರೆ ಎಂದು ಡಾ.ಪೀಟರ್ ಮಚಾದೊ ಹೇಳಿದ್ದಾರೆ.

‘ಕ್ರೈಸ್ತ ಸಮುದಾಯದವರ ವಿರುದ್ಧ ದ್ವೇಷ ಭಾಷಣಗಳು, ಚರ್ಚ್‍ಗಳು ಹಾಗೂ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗಳು, ಹೆಚ್ಚಿನ ರಾಜ್ಯಗಳಲ್ಲಿನ ರೂಪಿಸಲಾಗುತ್ತಿರುವ ‘ಮತಾಂತರ ನಿಷೇಧ ಕಾಯಿದೆ’ಗಳು ಕ್ರೈಸ್ತರನ್ನು, ಅವರ ಸಾಂವಿಧಾನಿಕ ಹಕ್ಕುಗಳಿಂದ ವಂಚಿಸುತ್ತಿವೆ. ಹಾಗಾಗಿ ಮೋದಿಯವರ ಶಾಂತಿ ಹಾಗೂ ಸನ್ನಡತೆಯ ಕ್ರಿಸ್ಮಸ್ ಸಂದೇಶವನ್ನು ಸಕಾರಾತ್ಮಕವಾಗಿ ಮುಂದುವರೆಸಬೇಕು. ಕ್ರೈಸ್ತ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಬಿಷಪ್‍ಗಳು, ಗುರುಗಳು ಸೇರಿ ಕ್ರೈಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

‘ಹೊತ್ತಿ ಉರಿಯುತ್ತಿರುವ ಮಣಿಪುರ ಸಮಸ್ಯೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಶೀಘ್ರದಲ್ಲೇ ಇತಿಶ್ರೀ ಹಾಡಬೇಕು. ಈ ಸಮಸ್ಯೆಯು ಜನಾಂಗೀಯ ಸಮಸ್ಯೆಯಾಗಿರಬಹುದು. ಆದರೆ, ಅಲ್ಲಿನ ಕ್ರೈಸ್ತ ಸಮುದಾಯದ ಜನರ ಮೇಲೆ ಇದು ಆಳವಾದ ಗಾಯವನ್ನುಂಟು ಮಾಡಿದೆ. ಇದೇ ರೀತಿ, ಪ್ರಧಾನಮಂತ್ರಿ ಕ್ರೈಸ್ತ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ದಲಿತ ಕ್ರೈಸ್ತರ ಮೀಸಲಾತಿ ಸಮಸ್ಯೆಯನ್ನು ಬಗೆಹರಿಸಬೇಕು’

-ಡಾ.ಪೀಟರ್ ಮಚಾದೊ, ಆರ್ಚ್ ಬಿಷಪ್ ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News