ಕೇಂದ್ರ ಸರಕಾರದ ಉದ್ದಿಮೆಗಳಲ್ಲಿ ಸೀಮಿತ ಅವಧಿಯ ಉದ್ಯೋಗ ಯೋಜನೆ, ಸ್ಥಳೀಯರಿಗೆ ಮಾರಕ : ಡಾ.ಬಿಳಿಮಲೆ

Update: 2024-11-28 14:47 GMT

ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ರಾಜ್ಯಗಳ ನೆಲ, ಜಲ, ಸಂಪತ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೇಂದ್ರದ ಉದ್ದಿಮೆಗಳಲ್ಲಿ ಖಾಲಿ ಇರುವ ಕೆಳವರ್ಗದ ಹುದ್ದೆಗಳನ್ನು ನಾಲ್ಕು ವರ್ಷಗಳ ಸೀಮಿತ ಅವಧಿಯ ಉದ್ಯೋಗಗಳೆಂದು ಹೆಸರಿಸಿ ನೇಮಕಾತಿ ಮಾಡಿಕೊಳ್ಳುವ ಕೇಂದ್ರದ ನೀತಿ ಸ್ಥಳೀಯರಿಗೆ ಮಾರಕವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಖಂಡಿಸಿದ್ದಾರೆ.

ಗುರುವಾರ ನಗರದಲ್ಲಿರುವ ಎಚ್.ಎ.ಎಲ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಗಳ ಯುವ ನಿರುದ್ಯೋಗಿಗಳಿಗೆ ಇಲ್ಲಿನ ಕೇಂದ್ರೋದ್ಯಮಗಳಲ್ಲಿ ಅವಕಾಶ ಕಲ್ಪಿಸದೇ ಹೋದಲ್ಲಿ ಭಾಷೆ ಸಮಸ್ಯೆಗಳು ಕ್ರಾಂತಿ ಸ್ವರೂಪದಲ್ಲಿ ಸ್ಪೋಟವಾಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.

ಭಾಷೆ ಸರಕಾರದ ಆದೇಶಗಳಿಂದ ಉಳಿಯುವುದಿಲ್ಲ, ಆಡಳಿತ ವ್ಯವಸ್ಥೆಗಳು ಅದರ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಮಾತ್ರ ಅದು ಸಾಂಸ್ಥಿಕ ಚೌಕಟ್ಟಿನಲ್ಲಿ ಉಳಿಯಲು ಸಾಧ್ಯ. ಎಚ್.ಎ.ಎಲ್. ಸಂಸ್ಥೆಯ ಆಡಳಿತ ವರ್ಗವು ಕನ್ನಡ ಭಾಷೆಗೆ ತನ್ನ ಕಾರ್ಯವ್ಯಾಪ್ತಿಯಲ್ಲಿ ಇನ್ನಷ್ಟು ಗೌರವವನ್ನು ದೊರಕಿಸಿಕೊಡಬೇಕಾದ ಅವಶ್ಯಕವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪರೀಕ್ಷಾರ್ಥಿಗಳಿಗೆ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯ ಲಿಖಿತ ಪರೀಕ್ಷೆಯನ್ನು ನಡೆಸುವ ಮೂಲಕ ಎಚ್.ಎ.ಎಲ್ ಸಂಸ್ಥೆಯು ಸ್ಥಳೀಯ ಪ್ರತಿಭೆಗಳಿಗೆ ಅನ್ಯಾಯ ಉಂಟು ಮಾಡಿರುವುದು ಖಂಡನೀಯವಾಗಿದೆ. ಅಲ್ಲದೆ ಸಂಸ್ಥೆಯ ನೌಕರರ ಉದ್ಯೋಗದ ನೇಮಕಾತಿಯಲ್ಲಿ ಗುತ್ತಿಗೆದಾರರು ಹೊರರಾಜ್ಯಗಳಿಗೆ ಸೇರಿದವರಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಈ ರೀತಿಯಾದಲ್ಲಿ ಗಂಭೀರ ಕ್ರಮಕ್ಕೆ ಪ್ರಾಧಿಕಾರವು ಆಲೋಚಿಸಬೇಕಾಗುತ್ತದೆ. ಲಿಖಿತ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವುದಲ್ಲದೇ ನೇಮಕಾತಿ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿರಬೇಕು. ಇದನ್ನು ಷರತ್ತು ನಿಬಂಧನೆಗಳಲ್ಲಿ ಪೂರ್ವಭಾವಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಎಚ್.ಎ.ಎಲ್ ಸಂಸ್ಥೆಯ ಅಧಿಕಾರಿಗಳಿಗೆ ಡಾ. ಪುರುಷೋತ್ತಮ ಬಿಳಿಮಲೆ ಸೂಚಿಸಿದರು.

ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗಿ :

ನಾಲ್ವಡಿ ಕೃಷ್ಣರಾಜ ಒಡೆಯರ್ ಮಂಜೂರು ಮಾಡಿದ ಜಮೀನಿನಲ್ಲಿ ನೆಲೆ ಕಂಡಿರುವ ಎಚ್.ಎ.ಎಲ್. ಸಂಸ್ಥೆಯು ತನ್ನ ಕನ್ನಡ ಪ್ರೇಮವನ್ನು ರುಜುವಾತು ಮಾಡಬೇಕಾದಲ್ಲಿ ಕೂಡಲೇ ಸಂಸ್ಥೆಯ ಆವರಣದಲ್ಲಿ ಅವರ ಹೆಸರಿನ ಕನ್ನಡ ಭವನ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. 2018ರಲ್ಲಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಿಯಾಶೀಲ ಬೆಳವಣಿಗೆ ಆಗದಿರುವುದು ವಿಷಾದನೀಯ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಇಂದಿಗೂ ಕನ್ನಡಕ್ಕೆ ಆದ್ಯತೆ ಇಲ್ಲ, ಸಂಸ್ಥೆಯ ಲಾಂಛನದಲ್ಲಿ ಕನ್ನಡವನ್ನು ಅಳವಡಿಸಿಲ್ಲ, ತ್ರಿಭಾಷೆ ಸೂತ್ರಕ್ಕೆ ಈ ರೀತಿ ಗೌರವಿಸುವುದು ಸರಿಯಾದ ವಿಧಾನವಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ ಡಾ.ಬಿಳಿಮಲೆ, ಕನ್ನಡಿಗರು ಉದ್ಯೋಗಕ್ಕೆ ಬರುತ್ತಿಲ್ಲವೆನ್ನುವ ಅಧಿಕಾರಿಗಳ ಮಾತು ಒಪ್ಪದ ಸಂಗತಿಯಾಗಿದ್ದು, ಇದಕ್ಕೆ ಬೇಕಾದ ಪ್ರಚಾರ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಪ್ರತಿಭಾನ್ವಿತರು ಖಂಡಿತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂದರು.

ಕನ್ನಡ ವಿರೋಧಿ ಧೋರಣೆ ಮುಂದುವರೆದಲ್ಲಿ ಸೂಕ್ತ ಕ್ರಮಕ್ಕಾಗಿ ಕೇಂದ್ರ ಸರಕಾರವನ್ನು ಆಗ್ರಹಿಸಲಾಗುವುದು. ಈ ಕುರಿತಂತೆ ಶೀಘ್ರದಲ್ಲಿ ಕೇಂದ್ರದ ಕನ್ನಡಿಗ ಸಚಿವರ ಗಮನವನ್ನು ಸೆಳೆಯಲಾಗುವುದು. ಯಾವುದೇ ಸಂದರ್ಭದಲ್ಲಿಯೂ ಅಧಿಕಾರಿಗಳು ಕೇಂದ್ರ ಸರಕಾರ ಮಾತ್ರ ಶ್ರೇಷ್ಠ ಮತ್ತು ರಾಜ್ಯಗಳು ಕನಿಷ್ಠ ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ವಿ.ಪಿ.ನಿರಂಜನಾರಾಧ್ಯ ಹಾಗೂ ಟಿ.ತಿಮ್ಮೇಶ್, ಎಚ್.ಎ.ಎಲ್.ನ ಅಧಿಕಾರಿಗಳು, ಎಚ್.ಎ.ಎಲ್. ಕೇಂದ್ರೀಯ ಕನ್ನಡ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News