ಲೋಕಸಭಾ ಚುನಾವಣೆ: 50 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು: ರಾಜ್ಯದಲ್ಲಿ ಎ.26ರಂದು 14 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳ ಒಟ್ಟು 50 ಅಭ್ಯರ್ಥಿಗಳಿಂದ 59 ನಾಮಪತ್ರಗಳು ಈವರೆಗೆ ಸ್ವೀಕೃತವಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪ್ರಕಟಣೆ ತಿಳಿಸಿದೆ.
59 ನಾಮಪತ್ರಗಳ ಪೈಕಿ 51 ನಾಮಪತ್ರಗಳನ್ನು ಪುರುಷರು ಹಾಗೂ 8 ನಾಮಪತ್ರಗಳನ್ನು ಮಹಿಳೆಯರು ಸಲ್ಲಿಕೆ ಮಾಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 3, ಹಾಸನ-4, ದಕ್ಷಿಣ ಕನ್ನಡ-4, ಚಿತ್ರದುರ್ಗ-1, ತುಮಕೂರು-4, ಮಂಡ್ಯ-3, ಮೈಸೂರು-4, ಚಾಮರಾಜನಗರ-5, ಬೆಂಗಳೂರು ಗ್ರಾಮಾಂತರ-7, ಬೆಂಗಳೂರು ಉತ್ತರ-6, ಬೆಂಗಳೂರು ಕೇಂದ್ರ-8, ಬೆಂಗಳೂರು ದಕ್ಷಿಣ-6, ಚಿಕ್ಕಬಳ್ಳಾಪುರ-2 ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಅಬಕಾರಿ ಇಲಾಖೆಯವರು ಕೆಎಸ್‍ಬಿಸಿಎಲ್ ಡಿಪೋ ನಲ್ಲಿ 1.13 ಕೋಟಿ ರೂ.ಮೌಲ್ಯದ 12,191.40 ಲೀಟರ್ ಭಾರತೀಯ ನಿರ್ಮಿತ ವಿದೇಶಿ ಮದ್ಯ(ಐಎಂಎಫ್‍ಎಲ್) ವನ್ನು ಬೆಂಗಳೂರು ನಗರ ಜಿಲ್ಲೆಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾದನಾಯಕನಹಳ್ಳಿಯಲ್ಲಿ ವಶಪಡಿಸಿಕೊಂಡಿದ್ದಾರೆ.
ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1030 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.
ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 1023 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 937 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 53 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 4005 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 591 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
.