ಸಂವಿಧಾನವನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ : ಎಂ.ವೀರಪ್ಪ ಮೊಯಿಲಿ
ಬೆಂಗಳೂರು : ಸರಕಾರ ಮತ್ತು ನ್ಯಾಯಾಲಯಕ್ಕಿಂತ ಭಾರತೀಯ ಸಂವಿಧಾನವೇ ನಮಗೆ ಸರ್ವಶ್ರೇಷ್ಠವಾದದ್ದು, ಹೀಗಾಗಿ ಇಂದು ಸಂವಿಧಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಲೇಬೇಕಾದ ಅನಿವಾರ್ಯತೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಎಂ.ವಿ.ಆರ್.ಫೌಂಡೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಎಂ.ವಿ.ರಾಜಶೇಖರನ್ ಜನ್ಮ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಾಗಿ ಇಂದಿನ ಮಕ್ಕಳು ಸಂವಿಧಾನವನ್ನು ಅರಿತುಕೊಂಡು, ಅದನ್ನು ಉಳಿಸುವ ಕೆಲಸ ಮಾಡಬೇಕಾದ ಅಗತ್ಯತೆ ಇದೆ ಎಂದರು.
ರಾಜಶೇಖರನ್ ಗಾಂಧಿ ತತ್ವ ಸಿದ್ಧಾಂತಗಳಲ್ಲಿ ಅಪಾರವಾದ ನಂಬಿಕೆ ಇಟ್ಟು ಆದರಂತೆ ಬದುಕನ್ನು ರೂಪಿಸಿಕೊಂಡವರು. ಅದರಂತೆ ತಮ್ಮ ಬದುಕಿನಲ್ಲಿ ಸರಳತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಪ್ರಬುದ್ಧ ರಾಜಕಾರಣಿ ಆಗಿದ್ದರು. ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರತಿಸಿಕೊಂಡಿದ್ದರು. ಇವರು ವ್ಯಕ್ತಿತ್ವ ಒಂದು ತರಹದ ಇತರರಿಗೆ ಮಾದರಿಯಾಗಬಲ್ಲದು ಎಂದು ಹೇಳಿದರು.
ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಯುವಕರು ಸಂವಿಧಾನವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿದೆ. ತಮ್ಮ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಅರಿತುಕೊಂಡು ಬಾಳ್ವೆ ನಡೆಸಲು ಸಂವಿಧಾನ ಓದು ಅತ್ಯವಶ್ಯಕ ಎಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ಮಾಜಿ ಸಂಸದ ಎಚ್.ಹನುಮಂತಪ್ಪ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಸಂದೇಶಗಳಂತೆ ಎಂ.ಜಿ.ರಾಜಶೇಖರನ್ ಬದುಕು ತೋರಿಸಿದವರು. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅಳಿಯರಾದರೂ ತಮ್ಮ ಸ್ವಪರಿಶ್ರಮದ ಮೇಲೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡ ಬಗೆಯೇ ವಿಶೇಷತೆಯಿಂದ ಕೂಡಿದೆ ಎಂದು ತಿಳಿಸಿದರು.