ಬೆಂಗಳೂರು| ಪಟಾಕಿ ಸ್ಫೋಟಕ್ಕೆ ಓರ್ವ ಬಲಿ
ಬೆಂಗಳೂರು: ದೀಪಾವಳಿ ಹಬ್ಬದ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾದ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.
ಪಟಾಕಿ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಶಬರೀಶ್ ಎಂಬ ಯುವಕ ಸಾವನ್ನಪ್ಪಿದ್ದು, ಕೃತ್ಯವೆಸಗಿದ ಆರೋಪದಡಿ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬುವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅ.31ರಂದು ಕೋಣನಕುಂಟೆ ಠಾಣೆ ವ್ಯಾಪ್ತಿಯ ವೀವರ್ಸ್ ಕಾಲೋನಿಯಲ್ಲಿ ಪಾನಮತ್ತರಾಗಿ ಪಟಾಕಿ ಸಿಡಿಸುತ್ತಿದ್ದ ಯುವಕರು, ಪಟಾಕಿ ಹಚ್ಚುವಾಗ ಅದರ ಮೇಲೆ ಡಬ್ಬ ಇರಿಸಿ, ಆ ಡಬ್ಬದ ಮೇಲೆ ಕುಳಿತುಕೊಳ್ಳುವಂತೆ ಶಬರೀಶನಿಗೆ ಸವಾಲೆಸೆದಿದ್ದರು ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿದ್ದ ಶಬರೀಶ್, ತಾನು ಪಟಾಕಿ ಸಿಡಿಯುವವರೆಗೂ ಡಬ್ಬದ ಮೇಲೆ ಕುಳಿತುಕೊಂಡರೆ, ತನಗೆ ಆಟೋ ರಿಕ್ಷಾ ಕೊಡಿಸಬೇಕು ಎಂದಿದ್ದ. ಅದಕ್ಕೆ ಸ್ನೇಹಿತರು ಒಪ್ಪಿಕೊಂಡಾಗ ಸವಾಲನ್ನು ಸ್ವೀಕರಿಸಿ ಡಬ್ಬದ ಮೇಲೆ ಕೂರಿದ್ದಾನೆ ಎಂದು ಹೇಳಲಾಗತ್ತಿದೆ.
ಪಟಾಕಿ ಸಿಡಿದ ರಭಸಕ್ಕೆ ಶಬರೀಶನ ಖಾಸಗಿ ಅಂಗಕ್ಕೆ ತೀವ್ರವಾಗಿ ಸುಟ್ಟ ಗಾಯವಾಗಿತ್ತು. ತಕ್ಷಣ ಶಬರೀಶನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.