ರಾಜ್ಯಪಾಲರಿಗೆ ತಾಕತ್ತು ಇದ್ದರೆ, ಆರೆಸ್ಸೆಸ್ ಪಡೆದುಕೊಂಡಿರುವ ಭೂಮಿಯನ್ನು ವಾಪಸ್ಸು ಪಡೆದುಕೊಳ್ಳಲಿ : ಮಾವಳ್ಳಿ ಶಂಕರ್

Update: 2024-09-03 17:03 GMT

ಬೆಂಗಳೂರು : ಕಳೆದ ಸರಕಾರದಲ್ಲಿ ಆರೆಸ್ಸೆಸ್ ರಾಜ್ಯದ ಬಡವರ, ರೈತರ ಭೂಮಿಯನ್ನು ವಂಚನೆ ಮಾಡಿ ಪಡೆದುಕೊಂಡಿದೆ. ರಾಜ್ಯಪಾಲರಿಗೆ ತಾಕತ್ತು ಇದ್ದರೆ, ಈ ಆರೆಸ್ಸೆಸ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ಒತ್ತಾಯಿಸಿದ್ದಾರೆ.

ಮಂಗಳವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ದಲಿತ ಸಂಘರ್ಷ ಸಮಿತಿಯು ಕೇಂದ್ರದ ಬಿಜೆಪಿ ಸರಕಾರದ ಕೈಗೊಂಬೆ ರಾಜ್ಯಪಾಲರ ನಡೆ ಖಂಡಿಸಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಗೆ ನಿಜವಾದ ತಾಕತ್ತು ಇದ್ದರೆ ಆರೆಸ್ಸೆಸ್ ಪಡೆದುಕೊಂಡಿರುವ ಭೂಮಿಯನ್ನು ವಾಪಸ್ಸು ಪಡೆದುಕೊಳ್ಳಲಿ ಎಂದು ಹೇಳಿದರು.

ಶೋಷಿತ ಸಮುದಾಯಗಳಿಗೆ ಅಧಿಕಾರ ಸಿಕ್ಕರೆ, ಮೇಲ್ವರ್ಗಗಳ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಆಗುತ್ತದೆ. ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಬಿಜೆಪಿ ಮತ್ತು ಜೆಡಿಎಸ್‍ನಿಂದ ಸಾಧ್ಯವಿಲ್ಲ. ಬಿಜೆಪಿ ಶುದ್ಧವಾದ ಪಕ್ಷವಂತೆ, ಭ್ರಷ್ಟಾಚಾರಿಗಳು ಬಿಜೆಪಿಗೆ ಹೋದರೆ ಶುದ್ದರಾಗುತ್ತಾರೆ. ಬಿಜೆಪಿ ವಾಷಿಂಗ್ ಮಿಶನ್ ಆಗಿ ಕೆಲಸ ಮಡುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

ರಾಜ್ಯಪಾಲರು ಅಧಿವೇಶನ ಭಾಷಣದಲ್ಲಿ ಸರಕಾರ ಪರಿಶುದ್ದವಾಗಿದ್ದು, ಭ್ರಷ್ಟಾಚಾರಕ್ಕೆ ಕಿಂಚಿತ್ತು ಜಾಗ ಇಲ್ಲ ಎಂದು ಹೇಳಿದ್ದರು. ಇದಾದ ಮೂರು ತಿಂಗಳಿನಲ್ಲೇ ಮುಖ್ಯಮಂತ್ರಿಗಳ ಮೇಲೆ ಕಾನೂನು ಕ್ರಮಕ್ಕೆ ಅವಕಾಶ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ದಲಿತ ಮುಖಂಡ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪತ್ನಿಗೆ ಕಾನೂನುಬಾಹಿರವಾಗಿ ಸೈಟ್‍ಗಳನ್ನು ನೀಡಿದ್ದಾರೆ. ಇದಕ್ಕಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಇದು ಸುಳ್ಳು ಸುದ್ದಿಯಾಗಿದೆ. ಕರ್ನಾಟಕ ಜನತೆ ತಿರಸ್ಕಾರ ಮಾಡಿರುವ ಬಿಜೆಪಿ ಮತ್ತು ಜೆಡಿಎಸ್‍ನವರು ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಹೀಗೆ ಮಾಡುತ್ತಿದ್ದಾರೆ. ಎಂದರು.

ಭೂಮಿಯನ್ನು ಕಬಳಿಸಿರುವವರು ಕೆರೆ-ಕುಂಟೆ, ದಲಿತರ ಭೂಮಿಯನ್ನು ಕಬಳಿಸಿರುವ ದೇವೇಗೌಡ, ಕುಮಾರಸ್ವಾಮಿ ಕುಟುಂಬದವರು ಇಂತಹ ಕೆಲಸವನ್ನು ಮಾಡುತ್ತಿದ್ದಾರೆ. ಮಹಾನ್ ಕಳ್ಳರು, ದರೋಡೆಕೋರರೆಲ್ಲ ಸೇರಿಕೊಂಡು ಕಳ್ಳತನ ಮಾಡಿ, ಕಳ್ಳತನವಾಗಿದೆ ಎಂದು ಈಚೆಗೆ ಬಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಅವರು ವಂಗ್ಯವಾಡಿದರು.

ಸಿದ್ದರಾಮಯ್ಯ ಸೈದ್ಧಾಂತಿಕ ಸ್ಪಷ್ಟತೆ ಇರುವ ವ್ಯಕ್ತಿತ್ವವನ್ನು ರೂಡಿಸಿಕೊಂಡಿದ್ದಾರೆ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದರೆ, ನಮಗೆ ರಾಜಕೀಯವಾಗಿ ಸ್ಥಳ ಸಿಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಕುಟಿಲ ಪ್ರಯತ್ನವನ್ನು ಮಾಡುತ್ತಿದೆ. ಖಾಸಗಿ ವ್ಯಕ್ತಿಗಳಿಗೆ ಹಣ ನೀಡಿ ದೂರು ಕೊಡಿಸಿದ್ದಾರೆ. ಆದರೆ ರಾಜ್ಯಪಾಲರಿಗೆ ವಿವೇಕ ಇರಬೇಕು. ಅವರಿಗೆ ದೂರು ಕೊಟ್ಟ ಮರುದಿನವೇ ನೋಟೀಸ್ ನೀಡಿದ್ದಾರೆ. ಇದೆಲ್ಲ ಒಳ ಒಪ್ಪಂದವಾಗಿದೆ ಎಂದರು.

ರಾಜ್ಯಪಾಲರಿಗೆ ಬಿಜೆಪಿ ಸರಕಾರದಲ್ಲಿ ಆಗಿರುವ ಹಗರಣಗಳ ಬಗ್ಗೆ ಕೊಟ್ಟಿರುವ ದೂರಗಳ ಸ್ಥಿತಗತಿಗಳು ಏನಾಗಿದೆ? ಗಣಿ ಪ್ರಕರಣಗಳಲ್ಲಿ, ಭೂಕಬಳಿಕೆ ಪ್ರಕರಣ, ಮೊಟ್ಟೆ ಹಗರಣಗಳ ಕುರಿತು ರಾಜ್ಯಪಾಲರಿಗೆ ಲೋಕಾಯುಕ್ತ ಸಂಸ್ಥೆಯೇ ದೂರು ನೀಡಿದೆ. ಆದರೆ ರಾಜ್ಯಪಾಲರು ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತರ ಪರವಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ದಲಿತ ಸಂಘರ್ಷ ಸಮಿತಿಯು ಬೆಂಬಲವಾಗಿ ನಿಲ್ಲಬೇಕಾಗಿದೆ. ರಾಜ್ಯಪಾಲರು ಸಂವಿಧಾನತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಸಭೆಯನ್ನು ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಹಠವೋ, ದಲಿತ ಬಚವೋ ಎಂದು ಕೆಲ ದಲಿತ ನಾಯಕರು ಬಿಜೆಪಿ ಪರವಾಗಿದ್ದಾರೆ. ಆದರೆ ದಲಿತರ ಅಸ್ಥಿತ್ವವನ್ನೇ ನಿರಾಕರಿಸುತ್ತಿರುವ ಬಿಜೆಪಿಗೆ ದಲಿತ ನಾಯಕರು ಬೆಂಬಲ ನೀಡುತ್ತಿರುವುದು ವಿಪರ್ಯಾಸವಾಗಿದೆ. ದಲಿತರನ್ನು ಹೊರಗಡೆ ಇಡುವ, ದಲಿತ ಭೂಮಿಯನ್ನು ಕಬಳಿಸುವವರಿಗೆ ಕಾಂಗ್ರೆಸ್ ಹಠವೋ, ದಲಿತ ಬಚವೋ ಚಳುವಳಿಯ ಲಾಭವನ್ನು ಕೊಡುತ್ತಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ ಗುರುಪ್ರಸಾದ್ ಕೆರೆಗೋಡು, ಕಾಂಗ್ರೆಸ್ ಸಂವಿಧಾನತ್ಮಕವಾಗಿ ನಡೆದುಕೊಳ್ಳುತ್ತದೆ ಎಂದು ನಂಬಿಕೆ ಇದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ನಾಯಕರು ಮಾತ್ರವಲ್ಲ. ದಲಿತರಿಗಾಗಿ ಒಂದು ಸರಕಾರ ಏನೇನು ಮಾಡಲು ಸಾಧ್ಯವಿದೆಯೋ ಅದನ್ನೇಲ್ಲ, ಮಾಡಿದ ಏಕೈಕ ನಾಯಕ ಸಿದ್ದರಾಮಯ್ಯ ಆಗಿದ್ದಾರೆ ಎಂದರು.

ಹಿರಿಯ ಮುಂಖಡ ಎನ್. ವೆಂಕಟೇಶ್ ಮಾತನಾಡಿ, ಚುನಾವಣೆಗೂ ಮುನ್ನ ದಲಿತ ಸಂಘರ್ಷ ಸಮಿತಿಯು ಇಲ್ಲಿನ ನ್ಯಾಷನಲ್ ಕಾಲೇಜು ಆವರಣದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿತ್ತು. ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದನ್ನು ಸಕಾರಗೊಳಿಸಿದ್ದೇವೆ. ಈಗ ಕೇಂದ್ರದಲ್ಲಿರುವ ವಿರೋಧ ಪಕ್ಷಗಳು ಸಂವಿಧಾನದ ಬಗ್ಗೆ ಮಾತನಾಡುತ್ತಿವೆ, ಸಂವಿಧಾನದ ಆಶಯಗಳನ್ನು ಈಡೇರಿಸುವ ಭರವಸೆಯನ್ನು ನೀಡುತ್ತಿವೆ. ಇದು ದೊಡ್ಡ ವಿಷಯವಾಗಿದೆ ಎಂದರು.

ಬಿಜೆಪಿ ಸರಕಾರ ಸಂಘ ಪರಿವಾರದ ಅಜೆಂಡಾವನ್ನು ಅನುಷ್ಟಾನ ಮಾಡುವಲ್ಲಿ ಕೆಲಸ ಮಾಡುತ್ತಿದೆ. ಇದನ್ನು ಪ್ರಕ್ರಿಯೆಯನ್ನು ನಾವು ಚಳುವಳಿಯ ಮೂಲಕವೇ ವಿರೋಧಿಸಬೇಕು. ಗೌರಿ ಲಂಕೇಶ್ ಸೇರಿ ಅನೇಕರನ್ನು ಕೊಲೆ ಮಾಡಿದ್ದಾರೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುವವರನ್ನು ಬಿಜೆಪಿ, ಆರೆಸ್ಸೆಸ್ ಗುರಿಯಾಗಿಸಿದೆ. ಕೋಲಾರದಲ್ಲಿ ನಡೆದ ಸಣ್ಣ ಘಟನೆಯನ್ನು ಆಧಾರಿಸಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಾತಿ ಗಣತಿಯಿಂದ ಶೋಷಿತರ ಪರವಾಗಿದೆ. ನಮ್ಮ ಸಾಮಾಜಿಕ, ಆರ್ಥಿಕ ಬದುಕಿನ ಸ್ಥಿತಿ-ಗತಿಗಳು ಮುನ್ನೆಲೆ ಬರುತ್ತವೆ. ಆದರೆ ಬಿಜೆಪಿ ಅದಕ್ಕೆ ವಿರೋಧಿಸುತ್ತಿವೆ. ನಮ್ಮನ್ನು ದಮನಕಾರಿ ನೀತಿಗಳಿಂದ ತುಳಿಯುತ್ತಿದ್ದಾರೆ. ಹೀಗಾಗಿ ಶೋಷಿತ ಸಮುದಾಯದವರು ಒಗ್ಗೂಡಿ ಹೋರಾಟವನ್ನು ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಇದೇ ವೇಳೆ ದಲಿತ ಮುಖಂಡ ಮರಿಯಪ್ಪ ಹಳ್ಳಿ, ಎನ್ ಮುನಿಸ್ವಾಮಿ, ವಿ. ನಾಗರಾಜ್, ಪ್ರೊ. ಹುಲ್ಕೆರೆ ಮಹಾದೇವ ಸೇರಿದಂತೆ ಮತ್ತಿತರರು ಇದ್ದರು.

ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು:

ಮುಡಾ ನಿವೇಶನ ಪರಿಹರ ಘಟನೆಯನ್ನು ಅಕ್ರಮವೆಂದು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ನೀಡಿರುವ ರಾಜ್ಯಪಾಲರು ತಮ್ಮ ನೋಟೀಸ್ ಹಾಗೂ ಪೂರ್ವಾನುಮತಿಯನ್ನು ಹಿಂಪಡೆಬೇಕು.

ರಾಜ್ಯಪಾಲರು ತಮ್ಮ ಕಚೇರಿಯಲ್ಲಿರುವ ಎಚ್.ಡಿ ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ಧನ ರೆಡ್ಡಿ ವಿರುದ್ಧ ಈಗಾಗಲೇ ಲೋಕಾಯುಕ್ತ, ಎಸ್‍ಐಟಿ ವತಿಯಿಂದ ತನಿಖೆ ಮುಗಿದಿರುವುದರಿಂದ ಸೂಕ್ತ ವಿಚಾರಣೆಗೆ ನಿರ್ದೇಶನ ನೀಡಬೇಕು.

ಸಾಮಾಜಿಕ ನ್ಯಾಯ ಮತ್ತು ಕಾರ್ಯಕ್ರಮಗಳ ವಿರುದ್ಧ ಸನಾತನ ಜಾತಿವಾದಿ, ಕೋಮುವಾದಿ ರಾಜಕಾರಣವು ಸಂಘಟಿತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿರುವ ಸಿದ್ದರಾಮಯ್ಯ ನಾಯಕತ್ವಕ್ಕೆ ದಲಿತ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ನೀಡಿ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News