ಮೆಟ್ರೋ 2ನೆ ಹಂತದ ಮಾರ್ಗ 2025ರ ವೇಳೆಗೆ ಲೋಕಾರ್ಪಣೆ: ಡಿ.ಕೆ.ಶಿವಕುಮಾರ್

Update: 2024-02-08 16:21 GMT

ಬೆಂಗಳೂರು: ‘ನಮ್ಮ ಮೆಟ್ರೋ ದೇಶದ ಇತರೇ ಭಾಗಗಳ ಮೆಟ್ರೋಗಳಿಗಿಂತ ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದು, ಎರಡನೆ ಹಂತದ ರೀಚ್-6 ಮೆಟ್ರೋ ಮಾರ್ಗ 2025ರ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ನಾಗವಾರ ಮುಖ್ಯರಸ್ತೆಯ ಕೆ.ಜಿ.ಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಸುರಂಗ ಕೊರೆದು ಯಂತ್ರ ಹೊರಬರುವ ಪ್ರಕ್ರಿಯೆಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ‘ಈ ಮಾರ್ಗದಲ್ಲಿ ಒಟ್ಟು 13.76 ಕಿ.ಮೀ ಉದ್ದ ಸುರಂಗ ಇರಲಿದ್ದು. ಡೈರಿ ವೃತ್ತದಿಂದ ನಾಗಾವರದ ತನಕ 12 ನಿಲ್ದಾಣಗಳು ಬರಲಿವೆ. ಕಾಳೇನ ಅಗ್ರಹಾರದಿಂದ ನಾಗಾವರದ ತನಕ ಈ ಮಾರ್ಗವು ಒಟ್ಟು 21.26 ಕಿಮೀ ಉದ್ದವಿದೆ. 9 ಸುರಂಗ ಕೊರೆಯುವ ಯಂತ್ರಗಳು ಈಗ ಕಾರ್ಯನಿರ್ವಹಿಸುತ್ತಿದ್ದು, 7 ಕಡೆಗಳಲ್ಲಿ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಒಟ್ಟು 12 ನಿಲ್ದಾಣಗಳಿದ್ದು, ಶೇ.75ರಷ್ಟು ಕಾಮಗಾರಿ ಮುಗಿದಿದೆ ಎಂದರು.

ಈ ಹಂತದ ಮೆಟ್ರೋ ಕಾಮಗಾರಿ ಜವಾಬ್ದಾರಿಯನ್ನು ಅಬ್‍ಕಾಮ್, ಎಲ್ ಅಂಡ್ ಟಿ ಮತ್ತು ಐಟಿಡಿ ಸಂಸ್ಥೆಗಳು ಗುತ್ತಿಗೆ ತೆಗೆದುಕೊಂಡಿವೆ. ಪ್ರಸ್ತುತ ಐಟಿಡಿ ಸಂಸ್ಥೆ ಗುತ್ತಿಗೆ ತೆಗೆದುಕೊಂಡಿರುವ ಭಾಗದಲ್ಲಿ ಸುರಂಗ ಕೊರೆಯುವ ಕೆಲಸವನ್ನು ವೀಕ್ಷಿಸಲಾಯಿತು. ಜಯದೇವ ಬಳಿ ರೀಚ್-6, ಎಂ.ಜಿ ರಸ್ತೆಯ ಬಳಿ ಇಂಟರ್ ಚೇಂಜ್, ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ, ನಾಗವಾರ ಇಂಟರ್ ಚೇಂಜ್ ನಿಲ್ದಾಣಗಳು ಈ ಭಾಗದ ಪ್ರಮುಖ ನಿಲ್ದಾಣಗಳಾಗಿವೆ. ನಮ್ಮ ಮೆಟ್ರೋ ಅಂತರರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಂಡಿದೆ. ದಿಲ್ಲಿಗಿಂತ ಉತ್ತಮವಾದ ಕೆಲಸ ನಮ್ಮಲ್ಲಿ ನಡೆದಿದೆ. ಯಾವುದೇ ಹಂತದಲ್ಲೂ ಕೆಲಸದ ಗುಣಮಟ್ಟದಲ್ಲಿ ರಾಜಿಯಾಗಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಇದರಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಆಗುವಂತಹ ಶೇ.60ರಷ್ಟು ವೆಚ್ಚ ತಗ್ಗಲಿದೆ. ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಜಂಟಿಯಾಗಿ ಈ ಯೋಜನೆಗೆ ವೆಚ್ಚ ಮಾಡಲಿವೆ. ಮೇಲ್ಸೇತುವೆ ನಿರ್ಮಾಣದ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಈ ರೀತಿಯ ಯೋಜನೆ ರೂಪಿಸಲಾಗಿದೆ. ನಾಗ್ಪುರದಲ್ಲಿ ಈ ರೀತಿಯ ಯೋಜನೆ ಗಮನಿಸಿದ್ದೆ. ಮುಂದಿನ ಮೆಟ್ರೋ ಕಾಮಗಾರಿಗಳಲ್ಲಿ ಈ ಆಲೋಚನೆಯನ್ನು ಕಾರ್ಯಗತ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಮುಂಬರುವ ಬಜೆಟ್‍ನಲ್ಲಿ ಹೊಸ ಮೆಟ್ರೋ ಮಾರ್ಗದ ಬಗ್ಗೆ ತುಮಕೂರು, ಆನೇಕಲ್, ಬಿಡದಿ ಮಾರ್ಗಗಳಲ್ಲಿ ಡಿಪಿಆರ್ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈಗಲೇ ಮಾಹಿತಿ ನೀಡುವುದಿಲ್ಲ. ಡಿಪಿಆರ್ ಬಂದ ನಂತರ ಮಾಹಿತಿ ನೀಡಲಾಗುವುದು. ಇಲ್ಲಿ ಕೇಂದ್ರ ಸರಕಾರದ ಪ್ರಾಯೋಜಕತ್ವವೂ ಇರುವುದರಿಂದ, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಶಿವಕುಮಾರ್ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News