ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಗ್ಯಾರೆಂಟಿಗಳಿಗೆ ಬಳಸಬೇಡಿ : ಸಚಿವ ಮಹದೇವಪ್ಪ ನಿವಾಸಕ್ಕೆ ದಲಿತ ಮುಖಂಡರ ಮುತ್ತಿಗೆ
ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಬಾರದು ಎಂದು ಆಗ್ರಹಿಸಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾಎಚ್.ಸಿ.ಮಹದೇವಪ್ಪ ನಿವಾಸಕ್ಕೆ ‘ದಸಂಸ ಒಕ್ಕೂಟ’ದ ಮುಖಂಡರು ಹಾಗೂ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಇಲ್ಲಿನ ಕ್ರಸೆಂಟ್ ರಸ್ತೆಯಲ್ಲಿನ ಡಾ.ಮಹದೇವಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ನೂರಾರು ಕಾರ್ಯಕರ್ತರು, ‘ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಗ್ಯಾರೆಂಟಿಗಳಿಗೆ ಬಳಸುವ ಮೂಲಕ ರಾಜ್ಯ ಸರಕಾರ ದಲಿತರಿಗೆ ದ್ರೋಹ ಬಗೆಯುತ್ತಿದೆ. ಗ್ಯಾರೆಂಟಿಗಳು ಸರಕಾರದ ಸಾಮಾನ್ಯ ಕಾರ್ಯಕ್ರಮಗಳು. ಪರಿಶಿಷ್ಟರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಅಪರಾಧ’ ಎಂದು ಆಕ್ಷೇಪಿಸಿದರು.
ನೇತೃತ್ವ ವಹಿಸಿದ್ದ ದಲಿತ ಮುಖಂಡ ಹಾಗೂ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ‘ಪರಿಶಿಷ್ಟ ಕಲ್ಯಾಣಕ್ಕಾಗಿ ಸಮಾಜ ಕಲ್ಯಾಣ ಅಡಿಯ ನಿಗಮಗಳಲ್ಲಿ ಮೀಸಲು ಸಂರಕ್ಷಣೆಗೆ ಕಾನೂನು ಬದ್ಧ ಕಾವಲು ಸಮಿತಿ ರಚನೆ ಮಾಡಬೇಕು. ಹೊರಗುತ್ತಿಗೆ ಮೀಸಲಾತಿ ನೇಮಕಕ್ಕೆ ವಿಧಿಸಿರುವ ಅವೈಜ್ಞಾನಿಕ ನಿಯಮಗಳಿಗೆ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.
ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಸಂವಿಧಾನ ವಿರೋಧಿಗಳನ್ನು ದೂರ ಇಡುವ ಕಾರಣದಿಂದ ಅನಿವಾರ್ಯವಾಗಿ ಕಾಂಗ್ರೆಸ್ ಬೆಂಬಲಿಸಿದ ದಲಿತರೇ ಇಂದು ಪಶ್ಚಾತ್ತಾಪ ಪಡುವಂತಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸರಕಾರದಿಂದ ದಲಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲವಾದರೆ ಬೀದಿಗಿಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಚಿವ ಡಾ.ಮಹದೇವಪ್ಪ ಅವರಿಗೆ ದಸಂಸ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ದಸಂಸ ಮುಖಂಡರಾದ ಎನ್.ವೆಂಕಟೇಶ್, ವಿ.ನಾಗರಾಜ್, ಮರಿಯಪ್ಪಹಳ್ಳಿ, ಹುಲ್ಕೆರೆ ಮಹದೇವ್, ರಮೇಶ್ ಡಾಕುಳಕಿ, ಗಂಗನಂಜಯ್ಯ, ಸಿ.ಜಿ.ಗಂಗಪ್ಪ, ಆನಂದ್, ಹಾರೋಹಳ್ಳಿ ರವಿ, ನಾಗರತ್ನ, ಜಯಂತಿ, ಜಯಮ್ಮ, ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.